ಬಗೆಬಗೆಯ ಗಾಳಿಪಟಗಳು. ಬಣ್ಣಬಣ್ಣದ ಗಾಳಿಪಟಗಳ ಸೊಬಗಿಗೆ ಅಕ್ಷರಶಃ ವಾಣಿಜ್ಯನಗರಿ ಜನ ಕುಣಿದಾಡಿದರು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಒಂದೆಡೆ ಐ ಲವ್ ಮೈ ಇಂಡಿಯಾ, ಮತ್ತೊಂದೆಡೆ "ಭಾರತ ವಸುಧೈವ ಕುಟುಂಬಕಂ " ಸಾರುವ ಗಾಳಿಪಟ, ಅದರ ಪಕ್ಕದಲ್ಲೇ ಡ್ರ್ಯಾಗನ್‌, ಡೆಲ್ಸ್, ಟ್ರೇನ್ ಸೇರಿದಂತೆ ಬಗೆಬಗೆಯ ಗಾಳಿಪಟಗಳು. ಬಣ್ಣಬಣ್ಣದ ಗಾಳಿಪಟಗಳ ಸೊಬಗಿಗೆ ಅಕ್ಷರಶಃ ವಾಣಿಜ್ಯನಗರಿ ಜನ ಕುಣಿದಾಡಿದರು.

ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಕುಸುಗಲ್ ರಸ್ತೆಯ ಬ್ರಿಡ್ಜ್ ಪಕ್ಕದ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 7ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶ ಮತ್ತು ರಾಜ್ಯದ ಕೈಟ್ ಫ್ಲೈಯರ್ಸ್ ವಿವಿಧ ಬಗೆಯ ಆಕಾರದ ಪಟಗಳನ್ನು ಹಾರಿಸುವ ಮೂಲಕ ಹುಬ್ಬಳ್ಳಿ ಜನತೆಯನ್ನು ರಂಜಿಸಿದರು.

ಒಡಿಶಾದ ಭುವನೇಶ್ವರದಿಂದ ಆಗಮಿಸಿದ್ದ ಕೈಟ್ ಫ್ಲಾಯರ್ಸ್ ತಂಡ ಶ್ರೀರಾಮ, ಹನುಮ, ಪಂಜುರ್ಲಿ, ಭಾರತೀಯ ಸೈನ್ಯಕ್ಕೆ ಸೇರಿ, ಹುಲಿ ಸಂರಕ್ಷಣೆಯ ಸಂದೇಶದ ಚಿತ್ತಾಕರ್ಷಕ ಪಟಗಳು ಜನರ ಮನಸೂರೆಗೊಂಡವು. ಹಾಲೆಂಡ್, ಯುಕೆ, ಸೌಥ್ ಯುರೋಪಿಯನ್, ನೆದರ್‌ಲ್ಯಾಂಡ್, ಇಂಡೋನೇಷಿಯಾ, ಗ್ರೀಸ್, ಸೂರತ್, ದೊಡ್ಡಬಳ್ಳಾಪುರ, ಬೆಳಗಾವಿಯ ಗಾಳಿಪಟಗಳು ಸೇರಿ ವಿದೇಶದ 14, ದೇಶದ 50ಕ್ಕೂ ಅಧಿಕ ಜನರು ವಿಶೇಷ ಗಾಳಿಪಟಗಳನ್ನು ಹಾರಿಸಿದರು.

ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದ ಕ್ರೀಡಾಪಟುಗಳು ತಮ್ಮ ನೈಪುಣ್ಯ ಬಳಸಿ, ವೇಗವಾಗಿ ಬೀಸುವ ಗಾಳಿಯಲ್ಲೂ ಗಾಳಿಪಟಗಳನ್ನು ನಿಯಂತ್ರಿಸಿ, ಹಾರಾಡಿಸಿದರು. ಗಾಳಿ ಜತೆಗೆ ಸುತ್ತುತ್ತ, ಆಕಾಶದತ್ತ ಸಾಗುತ್ತಿದ್ದ ತರಹೇವಾರಿ ಬೃಹತ್‌ ಗಾಳಿಪಟಗಳು ನೋಡುಗರ ಮನಸೆಳೆದವು.

ಒಂದೆಡೆ ಗಾಳಿಪಟಗಳು ಗಗನ ಚುಂಬಿಸುತ್ತಿದ್ದರೆ, ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆಯಿಂದ ಕೇಳಿಬರುತ್ತಿದ್ದ ಸಂಗೀತಕ್ಕೆ ತಕ್ಕಂತೆ ಮಕ್ಕಳು ಹೆಜ್ಜೆಹಾಕಿದರು. ಬಿಸಿಲನ್ನೂ ಲೆಕ್ಕಿಸದೆ ಗಾಳಿಪಟ ಹಾರಾಟ ವೀಕ್ಷಿಸುವುದರಲ್ಲೇ ತಲ್ಲೀನರಾಗಿದ್ದರು.

ಈ ಬಾರಿಗೆ ಈ ಎಲ್ಲ ಗಾಳಿಪಟಗಳಲ್ಲಿ ಹೆಚ್ಚಾಗಿ ಆಕರ್ಷಿಸಿದ್ದು "ಭಾರತ ವಸುಧೈವ ಕುಟುಂಬಕಂ " ಸಂದೇಶ ಸಾರುವ ಗಾಳಿಪಟ, ಜತೆಗೆ ಡೆಲ್ಟ್, ಸಣ್ಣ ಗಾಳಿಪಟಗಳನ್ನು ಹೊಂದಿದ್ದ ಟ್ರೇನ್ ಕೈಟ್, ಆಕ್ಟೋಪಸ್, ಕಾರ್ಟೂನ್‌ಗಳಾದ ಮಾರಿಯೋ, ಟೈಗರ್, ಫಿಶ್, ಗರುಡ ಹಾಗೂ ಸ್ಪೆಡರ್‌ಮ್ಯಾನ್ ಗಾಳಿಪಟ ಹೆಚ್ಚು ರಂಜಿಸಿತು. ಇನ್‌ಪ್ಲೇಟೆಬಲ್ ಕೈಟ್, ಸ್ಟಂಟ್ ಕೈಟ್, ರಿಂಗ್ ಕೈಟ್, ಕೇವಲ ನಾಲ್ಕು ಇಂಚಿನ ಟ್ರೈನ್ ಕೈಟ್ ಆಕಾಶದಲ್ಲಿ ಹಾರಾಟ ನಡೆಸಿದವು.

ಸಂತಸ

ಕಳೆದ ಹಲವಾರು ವರ್ಷದಿಂದ ವಿವಿಧ ರಾಜ್ಯಗಳಲ್ಲಿ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವೆ. ಈ ಬಾರಿ ಭಾರತ ವಸುಧೈವ ಕುಟುಂಬಕಂ ಸಾರುವ ಗಾಳಿಪಟ ಹೆಚ್ಚಿನ ಆಕರ್ಷಣೆಯಾಗಿದೆ. ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸುತ್ತಿರುವುದು ಸಂತೋಷ ನೀಡಿದೆ ಎಂದು ಒಡಿಶಾದಿಂದ ಆಗಮಿಸಿದ್ದ ಕೈಟ್‌ ಫ್ಲೇಯರ್‌ ಪ್ರಭಾತ್‌ ಕುಮಾರ್ ತಿಳಿಸಿದರು.

ಹುಬ್ಬಳ್ಳಿಗರಿಗೆ ಸಂಗೀತದ ರಸದೌತಣ

ಹುಬ್ಬಳ್ಳಿ: ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ನಗರದ ಕುಸುಗಲ್ಲ ರಸ್ತೆಯಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಶನಿವಾರ ಸಂಜೆ ಜನತೆಗೆ ಸಂಗೀತರ ರಸದೌತಣ ಉಣಬಡಿಸಲಾಯಿತು. ಪಂಜಾಬ್ ಮೂಲದ ಖ್ಯಾತ ಗಾಯಕ ಜಸ್ಕರನ್ ಸಿಂಗ್, ಪ್ರಸಿದ್ಧ ಗಾಯಕಿ ದಿವ್ಯಾ ರಾಮಚಂದ್ರ ಹಾಗೂ ಸಂಗೀತ ಸಂಯೋಜಕ ನಕುಲ್ ಅಭ್ಯಂಕರ್ ಅವರು ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ತಮ್ಮ ಸುಮಧುರ ಕಮಠದಿಂದ ಸುಶ್ರಾವ್ಯವಾಗಿ ಸಂಗೀತ ಪ್ರಸ್ತಿತಪಡಿಸುತ್ತಿದ್ದರೆ, ಪಾಲ್ಗೊಂಡ ಜನರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ವೇದಿಕೆಯ ಪಕ್ಕದಲ್ಲೆ ಬಾನಾಡಿಗಳಲ್ಲಿ ಬಣ್ಣಬಣ್ಣದ ಗಾಳಿಪಟಗಳು ರಾತ್ರಿಯ ಕತ್ತಲಲ್ಲೂ ಹೊಳೆಯುತ್ತಿರುವುದು ಕಂಡುಬಂದಿತು. ಮತ್ತೊಂದೆಡೆ ಭೋಜನ ಪ್ರಿಯರು ತಮ್ಮನೆಚ್ಚಿನ ಖಾದ್ಯಗಳನ್ನು ಸವಿಯುತ್ತ ಕಾರ್ಯಕ್ರಮವನ್ನು ಅನುಭವಿಸಿದರು.