ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.
ಅಳ್ನಾವರ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಎಂಎಸ್ಐಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ ಹೇಳಿದರು.ಸಮೀಪದ ಹುಲಿಕೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ''''ವಾತ್ಸಲ್ಯ'''' ಕಾರ್ಯಕ್ರಮದಡಿಯಲ್ಲಿ ಫಲಾನುಭವಿ ಯಲ್ಲವ್ವ ಅಂಬೋಜಿ ಅವರಿಗೆ ಮಂಜೂರಾದ ನೂತನ ಮನೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
"ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೂರು ಸಿಗಬೇಕು ಎಂಬ ಉದ್ದೇಶದಿಂದ ಸಂಸ್ಥೆಯು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಾತ್ಸಲ್ಯ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಾಣ, ವೃದ್ಧರಿಗೆ ಮಾಸಾಶನ ಹಾಗೂ ಜೀವನಾವಶ್ಯಕ ವಸ್ತುಗಳನ್ನು ಒದಗಿಸಲಾಗುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ದೇವಸ್ಥಾನಗಳ ಜೀರ್ಣೋದ್ಧಾರ, ಜಲಮೂಲಗಳ ರಕ್ಷಣೆಗಾಗಿ ಕೆರೆ-ಬಾವಿಗಳ ಹೂಳೆತ್ತುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಚಟುವಟಿಕೆಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲಾಗುತ್ತಿದೆ ಎಂದರು.ಸಂಸ್ಥೆಯ ದಾಂಡೇಲಿ ಯೋಜನಾಧಿಕಾರಿ ಬೋಸರಾಜ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆಯಂತೆ ಅಶಕ್ತರು, ನಿರ್ಗತಿಕರು ಹಾಗೂ ವೃದ್ಧರಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ವಾತ್ಸಲ್ಯ ಮನೆ ನಿರ್ಮಿಸಿಕೊಡಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯದ ವಿವಿಧೆಡೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಗ್ರಾಮದ ಹಿರಿಯರಾದ ಬಸವರಾಜ ಇನಾಮದಾರ, ರಮೇಶ ಕಿತ್ತೂರ, ಪ್ರವೀಣ ಪವಾರ, ವಿಷ್ಣು ಕಿತ್ತೂರ, ಸೋಮನಿಂಗ ಗರಗ, ಮಹಾಂತೇಶ ಕಂಬಾರ, ಮಂಜುನಾಥ ಬೆಳಗಾವಿ, ಜಗದೀಶ ಕಿತ್ತೂರ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಉಪಸ್ಥಿತರಿದ್ದರು.