ಸೂಕ್ತ ಅವಕಾಶ ಮತ್ತು ಸರ್ಕಾರದ ನೆರವು ದೊರೆತರೆ ಅವರೂ ಗೌರವಯುತ ಬದುಕು ರೂಪಿಸಿಕೊಳ್ಳಬಲ್ಲರು ಎಂಬುದಕ್ಕೆ ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಜೀಗೇರಿ ಗ್ರಾಮದ ೩೫ ವರ್ಷದ ಪರಶುರಾಮ ಚೌಡಕಿ ಸಾಕ್ಷಿಯಾಗಿದ್ದಾರೆ.
ಜೀಗೇರಿ ಗ್ರಾಮದ ಪರಶುರಾಮ ಚೌಡಕಿ ಸ್ವಾವಲಂಬಿ ಬದುಕಿಗೆ ಆಸರೆಯಾದ ಯೋಜನೆ
ಎಸ್.ಎಂ.ಸೈಯದ್
ಕನ್ನಡಪ್ರಭ ವಾರ್ತೆ ಗಜೇಂದ್ರಗಡಬದುಕಿನಲ್ಲಿ ಕೆಲವೊಮ್ಮೆ ಎದುರಾಗುವ ಸವಾಲುಗಳು ಮನುಷ್ಯನ ಕನಸುಗಳಿಗೆ ತಣ್ಣೀರು ಎರಚುತ್ತವೆ. ಅದರಲ್ಲೂ ವಿಶೇಷಚೇತನರು ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹತ್ತಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಸೂಕ್ತ ಅವಕಾಶ ಮತ್ತು ಸರ್ಕಾರದ ನೆರವು ದೊರೆತರೆ ಅವರೂ ಗೌರವಯುತ ಬದುಕು ರೂಪಿಸಿಕೊಳ್ಳಬಲ್ಲರು ಎಂಬುದಕ್ಕೆ ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಜೀಗೇರಿ ಗ್ರಾಮದ ೩೫ ವರ್ಷದ ಪರಶುರಾಮ ಚೌಡಕಿ ಸಾಕ್ಷಿಯಾಗಿದ್ದಾರೆ.
ಗೆಳಯರೊಂದಿಗೆ ಗ್ರಾಮದಲ್ಲಿ ಸೈಕಲ್ ಚಲಾಯಿಸುವಾಗ ಆಯ ತಪ್ಪಿ ಬಿದ್ದು ಬಲ ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಾಗ ಪರಶುರಾಮಗೆ ೫ ವರ್ಷ. ಪರಿಣಾಮ ಬೇರೆ ಕಡೆ ಹೋಗಿ ದುಡಿಯಲು ಆಗುವುದಿಲ್ಲ, ಕೆಲಸಕ್ಕೆ ಯಾರೂ ಕರೆಯುವುದಿಲ್ಲ. ಹೀಗಾಗಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಗ್ರಾಮದಲ್ಲಿಯೇ ಪುಟ್ಟ ಹಿಟ್ಟಿನ ಗಿರಣಿ ನಡೆಸುತ್ತಿದ್ದು ಜಾಸ್ತಿ ದುಡಿಮೆ ಆಗುವುದಿಲ್ಲ. ಸರ್ಕಾರದಿಂದ ದೊರೆಯುವ ಮಾಸಿಕ ಅಂಗವಿಕಲರ ವೇತನವೂ ಅವರ ಸಂಪೂರ್ಣ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಪರಶುರಾಮ ಅವರ ಬದುಕಿಗೆ ವಿಬಿಜಿ-ರಾಮ್ ಜಿ ಯೋಜನೆ ಹೊಸ ಭರವಸೆಯ ಮೂಡಿಸಿದೆ.ಕುಟುಂಬಕ್ಕೆ ಆಸರೆಯ ಭರವಸೆ:
ತಾಯಿ, ಇಬ್ಬರು ತಮ್ಮಂದಿರು, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಇವರು ಜೀವನ ಸಾಗಿಸುತ್ತಿದ್ದಾರೆ. ನಾಲ್ಕು ಎಕರೆ ಜಮೀನು ಇದ್ದು, ತಮ್ಮಂದಿರು ಇಬ್ಬರು ಜಮೀನಿನಲ್ಲಿ ಕೆಲಸ ಮಾಡುತ್ತಾರೆ.ಜಮೀನಿನಲ್ಲಿ ದುಡಿಯಲು ಆಗದೆ ಗ್ರಾಮದಲ್ಲಿ ಸ್ವಂತ ಗಿರಣಿ ಹಾಕಿಕೊಂಡು ದುಡಿಮೆ ಮಾಡುತ್ತಿದ್ದೇನೆ. ನಮ್ಮದು ಅವಿಭಕ್ತ ಕುಟುಂಬ ಆಗಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದೀಗ ವಿಬಿಜಿ-ರಾಮ್ ಜಿ ಯೋಜನೆಯಡಿ ದೊರೆತ ಉದ್ಯೋಗ ಅವರ ಬದುಕಿನಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ. ನಮ್ಮೂರಲ್ಲಿ ಯಾವಾಗ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸುತ್ತಾರೆ ಅವಾಗ ಉತ್ಸಾಹದಿಂದ ಕೆಲಸಕ್ಕೆ ಬರುತ್ತೇನೆ ಎನ್ನುತ್ತಾರೆ ಪರಶುರಾಮ್ ಚೌಡಕಿ.
ಕೂಲಿ ಹೆಚ್ಚಳ, ಉದ್ಯೋಗದ ದಿನಗಳ ಹೆಚ್ಚಳ!:ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಾಗಿರುವ ವಿಬಿಜಿ-ರಾಮ್ ಜಿ ಯೋಜನೆಯಡಿ ಮಹತ್ವದ ಬದಲಾವಣೆಗಳಾಗಿವೆ. ಈ ಹಿಂದೆ ನರೇಗಾ ಯೋಜನೆಯಡಿ ದಿನಕ್ಕೆ ₹೩೭೦ ಕೂಲಿ ನೀಡಲಾಗುತ್ತಿತ್ತು. ಇದೀಗ ವಿಬಿಜಿ-ರಾಮ್ ಜಿ ಯೋಜನೆಯಡಿ ದಿನಗೂಲಿಯನ್ನು ₹೩೮೨ಕ್ಕೆ ಹೆಚ್ಚಿಸಲಾಗಿದ್ದು, ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಉದ್ಯೋಗ ಒದಗಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಮೀಣ ಕಾರ್ಮಿಕರಿಗೆ ಹೆಚ್ಚಿನ ದಿನಗಳ ಉದ್ಯೋಗದ ಜೊತೆಗೆ ಹೆಚ್ಚುವರಿ ಆದಾಯ ಗಳಿಸಲು ಸಹಕಾರಿಯಾಗಲಿದೆ. ವಿಶೇಷವಾಗಿ, ವಿಶೇಷಚೇತನರಿಗೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿರುವುದು ಈ ಯೋಜನೆಯ ಮತ್ತೊಂದು ಮಹತ್ವದ ಅಂಶವಾಗಿದೆ.
ನಮಗೆ ಹೊರಗಡೆ ಯಾರು ದುಡಿಯಲು ಕರೆಯುವುದಿಲ್ಲ. ಗ್ರಾಮದಲ್ಲಿ ಕಾಲಿ ಕುಳಿತುಕೊಳ್ಳುವ ಬದಲು ವಿಬಿಜಿ- ರಾಮ್ ಜಿ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದಿದ್ದೇವೆ. ವಿಶೇಷಚೇತನರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿರುವುದರಿಂದ ಉತ್ಸಾಹದಿಂದ ಕೆಲಸಕ್ಕೆ ಬಂದಿದ್ದೇವೆ. ನಾವು ದುಡಿದ ಹಣ ಕುಟುಂಬದ ನಿರ್ವಹಣೆಗೆ ಅನುಕೂಲವಾಗಲಿದೆ.ಪರಶುರಾಮ್ ಚೌಡಕಿ
ಕೂಲಿಕಾರರು ಜೀಗೇರಿ ಗ್ರಾಮವಿಬಿಜಿ-ರಾಮ್ ಜಿ ಯೋಜನೆಯಡಿ ವಯೋವೃದ್ಧರಿಗೆ, ವಿಶೇಷಚೇತನರಿಗೆ ಬುದ್ಧಿಮಾಂದ್ಯರಿಗೆ ಪ್ರತ್ಯೇಕ ಜಾಬ್ ಕಾರ್ಡ್ ನೀಡಿ ಉದ್ಯೋಗ ನೀಡಲಾಗುತ್ತದೆ. ವಿಶೇಷಚೇತನರು ಯಾರೇ ಕೆಲಸಕ್ಕೆ ಬಂದರು ಅವರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿ ಕೆಲಸ ಮಾಡಲು ಪ್ರೇರೇಪಿಸುತ್ತೇವೆ. ಅವರು ದುಡಿದ ಕೂಲಿ ಮೊತ್ತ ಅವರಿಗೆ ಜಮಾ ಆಗುವುದರಿಂದ ಜೀವನಕ್ಕೆ ಅನುಕೂಲವಾಗಲಿದೆ.ಸಂಗಪ್ಪ ಕುಡಗಿ, ಪಿಡಿಒ, ಕುಂಟೋಜಿ ಗ್ರಾಪಂ
ಸರ್ಕಾರದ ಮಾರ್ಗಸೂಚಿಯಂತೆ ವಿಬಿಜಿ-ರಾಮ್ ಜಿ ಯೋಜನೆಯಡಿ ವಯೋವೃದ್ಧರಿಗೆ ವಿಶೇಷಚೇತನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ವಿಶೇಷಚೇತನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.೫೦ರಷ್ಟು ಕೆಲಸ ನಿರ್ವಹಿಸಿದರೂ ಪೂರ್ಣ ಪ್ರಮಾಣದ ಕೂಲಿ ಹಣ ಪಾವತಿಸಲಾಗುತ್ತದೆ. ಅವರಿಗೂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ದೊರೆಯಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಚಂದ್ರಶೇಖರ ಬಿ. ಕಂದಕೂರ, ತಾಪಂ ಇಒ