ಹಿರೇಕೆರೂರು: ವಿಬಿ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾಗದ ಆರ್ಥಿಕತೆಗೆ ಹೊಸ ಶಕ್ತಿ ತುಂಬಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಕೇಂದ್ರ ಸರ್ಕಾರದ ಜಾರಿ ಮಾಡಿದ ನೂತನ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ಏರ್ಪಡಿಸಿದ್ದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಮೊದಲು ಜಾರಿಯಲ್ಲಿದ್ದ ರಾಷ್ಟ್ರೀಯ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ, ಕೆಲವರ ಜೇಬು ತುಂಬುವ ಯೋಜನೆಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯೂನತೆಗಳನ್ನು ಸರಿಪಡಿಸಿ ವಿಬಿ-ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಒಂದು ವರ್ಷಕ್ಕೆ 125 ದಿನಗಳ ಉದ್ಯೋಗ ಖಾತ್ರಿ ನೀಡುವುದು ಮತ್ತು ಕೃಷಿ ಹಂಗಾಮಿನಲ್ಲಿ ರೈತರಿಗೆ, ಕಾರ್ಮಿಕರಿಗೆ ವ್ಯವಸ್ಥೆ ಮಾಡಿರುವುದು ನಿಜಕ್ಕೂ ರೈತಪರ ಕಾಳಜಿಯಾಗಿದೆ ಎಂದು ಹೇಳಿದರು.
ಭ್ರಷ್ಟಾಚಾರ ತೊಲಗಿಸಿ, ಹಳ್ಳಿಗಳಲ್ಲಿ ಶಾಶ್ವತ ಅಭಿವೃದ್ಧಿ ತರುವ ಈ ಕಾಯ್ದೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ, ಬಡವರ, ಕೂಲಿಕಾರರ ದಾರಿ ತಪ್ಪಿಸುತ್ತಿದೆ. ಇದನ್ನು ವಿರೋಧಿಸಿ ರೈತ, ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಪ್ರತಿ ವ್ಯಕ್ತಿಯ ಉದ್ಯೋಗದ 125 ದಿನಗಳನ್ನು ಗ್ರಾಮ ಪಂಚಾಯತಿಗಳೇ ನಿರ್ಧಾರ ಮಾಡಬಹುದು. ಆದರೆ ರಾಜ್ಯ ಸರ್ಕಾರ ಕಾರ್ಮಿಕರಲ್ಲಿ ತಪ್ಪು ತಿಳಿವಳಿಕೆ ಮೂಡಿಸುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದೇ ಇರುವ ವಿಚಾರವನ್ನು ಹೇಳಿ ಕಾರ್ಮಿಕರಿಗೆ ಈ ಯೋಜನೆಯಿಂದ ದೂರ ಮಾಡುತ್ತಿದೆ. ನರೇಗಾ ಯೋಜನೆಯಲ್ಲಿ ಹಲವಾರು ಪ್ರಕರಣಗಳು ಭ್ರಷ್ಟಾಚಾರದಿಂದ ಕೂಡಿರುವುದು, ಯೋಜನೆಗಳ ದುರ್ಬಳಕೆ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೂಲಿಕಾರರ ಹೆಸರು ಹೇಳಿ ವೇತನ ತೆಗೆದಿರುವ ದೂರಿದೆ. ಇದನ್ನು ಸರಿಪಡಿಸಲು ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಿ, ಸೋರಿಕೆ ತಡೆಗಟ್ಟಲು ಈ ಯೋಜನೆ ಮಾಡಿದರೆ, ಇದರಿಂದ ವಂಚನೆ ಆಗುತ್ತದೆ ಎಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದರು.ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ವಿಬಿ ಜಿ-ರಾಮ ಜಿ ಯೋಜನೆ ಸಂಚಾಲಕ ಜಿ.ಪಿ. ಪ್ರಕಾಶಗೌಡ, ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ದೇವೇಂದ್ರಪ್ಪ ದೊಡ್ಡಾರೇರ, ಹನುಮಂತಪ್ಪ ಗಾಳೇವರ ಇದ್ದರು.