ವೇದ, ಸಂಸ್ಕೃತ, ಯೋಗ ವಿಶ್ವಮಾನ್ಯ: ಗೋಪಾಲಕೃಷ್ಣ ಭಟ್ಟ

| Published : Apr 16 2024, 01:04 AM IST

ವೇದ, ಸಂಸ್ಕೃತ, ಯೋಗ ವಿಶ್ವಮಾನ್ಯ: ಗೋಪಾಲಕೃಷ್ಣ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಾಹ್ಮಣ ಸಮಾಜವು ವಿಶ್ವಕ್ಕೇ ಒಳಿತಾಗುವಂತೆ ಸದಾ ಸನ್ಮಾರ್ಗದಲ್ಲಿ ನಡೆದು ತಪಸ್ಸನ್ನೇ ಪ್ರಧಾನವಾಗಿರಿಸಿಕೊಂಡು ಮುನ್ನಡೆಯಬೇಕು ಎಂದು ಗೋಪಾಲಕೃಷ್ಣ ಭಟ್ಟ ತಿಳಿಸಿದರು.

ಯಲ್ಲಾಪುರ: ಜಗತ್ತು ಹೇಗೆ ಸೃಷ್ಟಿಯಾಗಿದೆ ಎಂಬುದರ ಕುರಿತು ವೇದದಲ್ಲಿ ವಿವರಿಸಲಾಗಿದೆ. ಇಂತಹ ವೇದ, ಸಂಸ್ಕೃತ, ಯೋಗ ಮುಂತಾದವುಗಳು ವಿಶ್ವಮಾನ್ಯವಾಗಿವೆ. ಬ್ರಾಹ್ಮಣರು ಇವುಗಳ ಪರಿಪೂರ್ಣ ಅಧ್ಯಯನ ಮಾಡಿ, ಉಳಿದ ಸಮಾಜದವರಿಂದಲೂ ಗೌರವಾನ್ವಿತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ತಿಳಿಸಿದರು.

ಏ. ೧೪ರಂದು ಪಟ್ಟಣದ ಶ್ರೀ ಶಾರದಾಂಬಾ ಸಂಸ್ಕೃತ ವೇದ ಪಾಠಶಾಲೆಯಲ್ಲಿ ಉಪನೀತ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ೨೫ ದಿನಗಳ ವೇದ-ಸಂಸ್ಕೃತ-ಯೋಗ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.

ಬ್ರಾಹ್ಮಣ ಸಮಾಜವು ವಿಶ್ವಕ್ಕೇ ಒಳಿತಾಗುವಂತೆ ಸದಾ ಸನ್ಮಾರ್ಗದಲ್ಲಿ ನಡೆದು ತಪಸ್ಸನ್ನೇ ಪ್ರಧಾನವಾಗಿರಿಸಿಕೊಂಡು ಮುನ್ನಡೆಯಬೇಕು. ಕೇವಲ ಮಂದಿರಗಳಲ್ಲಿ ಪೂಜೆಗಳಿಗಷ್ಟೇ ಸೀಮಿತವಾಗಿರಬಾರದು. ಬ್ರಾಹ್ಮಣರಿಗೆ ಹೇಳಿದ ಎಲ್ಲ ವಿಧಿ- ವಿಧಾನಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರು ನಿಜವಾದ ಬ್ರಾಹ್ಮಣರಾಗಲು ಸಾಧ್ಯ. ಇಂದು ಅನೇಕರು ಸಂಧ್ಯಾವಂದನೆಯನ್ನೂ ಮಾಡದಿರುವುದು ವಿಪರ್ಯಾಸ. ಈ ದೃಷ್ಟಿಯಿಂದಲೇ ನಮ್ಮ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಇಂತಹ ಶಿಬಿರಗಳನ್ನು ಆಯೋಜಿಸಲು ಪ್ರೇರಣೆ ನೀಡಿದ್ದಾರೆ ಎಂದರು.

ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಮಾತನಾಡಿ, ಸಂಸ್ಕೃತ ಕಲಿತರೆ ಹೊಟ್ಟೆ ತುಂಬುತ್ತದೆಯೇ; ಇದು ಮೃತಭಾಷೆ ಎಂದು ಒಮ್ಮೆ ನಮ್ಮ ಮುಖ್ಯಮಂತ್ರಿಗಳು ಹೇಳಿದ್ದು ನೆನಪಾಗುತ್ತದೆ. ಸಂಸ್ಕೃತ ವಿಶ್ವಭಾಷೆಯಾಗಿ ಹೊರಹೊಮ್ಮಿದೆ. ನಮ್ಮ ಅನೇಕ ಸಂಸ್ಕೃತ ಗ್ರಂಥಗಳನ್ನು ಜರ್ಮನಿಯರು ಪೇಟೆಂಟ್ ಪಡೆದುಕೊಂಡಿದ್ದಾರೆ. ಈ ನೆಲದ ಸಂಸ್ಕೃತ, ವೇದಗಳನ್ನು ಪ್ರಪಂಚ ಗೌರವಿಸುತ್ತಿದ್ದರೆ, ಈ ದೇಶದ ಕೆಲವೇ ಕೆಲವು ಜನ ತಿಳಿವಳಿಕೆ ಇಲ್ಲದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ನಿಂದಿಸುತ್ತಿರುವುದು ಕ್ಲೀಷೆಯ ಸಂಗತಿ ಎಂದರು.

ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಮಾತನಾಡಿ, ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿಯ ಶಿಕ್ಷಣದ ವ್ಯವಸ್ಥೆಯಿತ್ತು. ಇಂದು ಆಧುನಿಕ ಶಿಕ್ಷಣದ ಭರಾಟೆಯಲ್ಲಿ ನಮ್ಮನ್ನು ನಾವು ಮರೆಯುತ್ತಿದ್ದೇವೆ. ಅಲ್ಲದೇ ಸನಾತನ ಧರ್ಮದ ನಾಶದ ಕುರಿತು ಮಾತನಾಡುವ ವ್ಯಕ್ತಿಗಳು ಸಮಾಜದಲ್ಲಿ ಬೆಳೆಯುತ್ತಿದ್ದಾರೆ. ಅದಕ್ಕಾಗಿ ನಮ್ಮತನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿ, ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಜೀವನಪಾಠ, ಶಿಸ್ತು, ಜತೆಗೆ ಬದುಕಿನ ಹಲವು ಚಿಂತನೆಗಳು ಲಭಿಸುತ್ತವೆ. ನಾವು ಕಷ್ಟಪಟ್ಟು ಶಿಬಿರವನ್ನು ಆಯೋಜಿಸಿದ್ದೇವೆ. ಅನೇಕ ದಾನಿಗಳ, ಪಾಲಕರ ಸಹಕಾರದಿಂದ ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ನಿರ್ದೇಶಕ ದತ್ತಾತ್ರೇಯ ಭಟ್ಟ ಮುಂಡಗೋಡಿ, ಶಿಬಿರ ಸಂಚಾಲಕರಲ್ಲೊಬ್ಬರಾದ ವೆಂಕಟರಮಣ ಭಟ್ಟ ಸೂಳಗಾರ ಉಪಸ್ಥಿತರಿದ್ದರು. ಪಾಠಶಾಲಾ ವಿದ್ಯಾರ್ಥಿಗಳ ವೇದಘೋಷದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ಭಟ್ಟ ಸ್ವಾಗತಿಸಿದರು. ಪಾಠಶಾಲಾ ಶಿಕ್ಷಕ ಡಾ. ಶಿವರಾಮ ಭಾಗ್ವತ ನಿರ್ವಹಿಸಿ, ವಂದಿಸಿದರು.