ಹಲಗೂರು:

ಗೊಲ್ಲರಹಳ್ಳಿಯ ಸತೀಶ್ ತೇಜಸ್ ದಂಪತಿ ಪುತ್ರ ವೇದಾಂತ್ ಗೌಡನ 4ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ, ಶಾಲಾ ಬ್ಯಾಗ್‌ ಹಾಗೂ ಲೇಖನಿ ಸಾಮಗ್ರಿ ಮತ್ತು ಜಮಖಾನೆ ನೀಡಿದರು.

ಸತೀಶ್ ಮಾತನಾಡಿ, ನನ್ನ ಮಗನ ಹುಟ್ಟುಹಬ್ಬವನ್ನು ಸರಳವಾಗಿ ಶಾಲಾ ವಿದ್ಯಾರ್ಥಿಗಳ ಜೊತೆ ಆಚರಿಸಿಕೊಳ್ಳಬೇಕು ಎಂಬ ಮಹಾದಾಸೆಯಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನಿ ಸಾಮಗ್ರಿ ಹಾಗೂ ನೋಟ್ ಪುಸ್ತಕ ವಿತರಿಸಿದ್ದೇವೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ನಾವುಗಳೆಲ್ಲಾ ಮುಂದಾಗಬೇಕಾಗಿದೆ ಎಂದರು.

ಪ್ರತಿ ವರ್ಷವೂ ನಾನು ಇದೇ ಶಾಲೆಯಲ್ಲಿ ನನ್ನ ಮಗನ ಹುಟ್ಟುಹಬ್ಬ ಆಚರಿಸುತ್ತೇನೆ. ಹುಟ್ಟಹಬ್ಬದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಿದ್ದೇನೆ ಎಂದರು.

ಶಿಕ್ಷಕ ಬಸವರಾಜು ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯ ದೊರಕುತ್ತಿದೆ. ಇದರ ಜೊತೆಯಲ್ಲಿ ಇಂತಹ ದಾನಿಗಳು ನೀಡುವ ಕೊಡುಗೆಗಳನ್ನು ಪಡೆದು ಉನ್ನತ ವ್ಯಾಸಂಗ ಮಾಡಬೇಕು ಎಂದರು.


ಈ ವೇಳೆ ಶಾಲೆ ಮುಖ್ಯ ಶಿಕ್ಷಕ ಚೌಡಯ್ಯ, ಶಿಕ್ಷಕ ಗಿರೀಶ್‌, ಅತಿಥಿ ಶಿಕ್ಷಕಿ ಪದ್ಮಾವತಿ ಸೇರಿದಂತೆ, ಮುಖಂಡರಾದ ನಾಗೇಶ್, ಸಿದ್ದರಾಜು, ಹೊನ್ನೇಗೌಡ, ಸಿದ್ದಯ್ಯ, ದೇವೇಗೌಡ, ಮಹೇಶ್‌, ಪುಟ್ಟಸ್ವಾಮಿ, ನಾಗರಾಜು, ಕಾಲ ವೆಂಕಟೇಗೌಡ ಇತರರು ಇದ್ದರು.

ನಾಳೆ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ

ಮಂಡ್ಯ: ತಾಲೂಕಿನ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 28ರಂದು 2026-27ನೇ ಸಾಲಿನ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡೀಸಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಶೋಭರಾಣಿ, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲ ಮಠಪತಿ, ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವೀಣಾ. ಉಪ ಪ್ರಾಂಶುಪಾಲೆ ರೇಣುಕಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಶೀಲ್ ಕುಮಾರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಕೆ.ಎಂ.ಕೃಷ್ಣೆಗೌಡ ಆಗಮಿಸಲಿದ್ದಾರೆ.