ಛಲವಾದಿ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ವೇದವ್ಯಾಸ್‌ ಕಾಮತ್‌ ಆಗ್ರಹ

| Published : May 22 2025, 11:52 PM IST

ಛಲವಾದಿ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ವೇದವ್ಯಾಸ್‌ ಕಾಮತ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ವಿಪಕ್ಷ ನಾಯಕರು ಹಾಗೂ ಶೋಷಿತ ಸಮುದಾಯಗಳ ಪ್ರಬಲ ಧ್ವನಿಯಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಕಲುಬುರಗಿ ಚಿತ್ತಾಪುರದ ಅತಿಥಿ ಗೃಹದಲ್ಲಿ ಕಾಂಗ್ರೆಸಿನ ಗೂಂಡಾ ಬೆಂಬಲಿಗರಿಂದ ದಿಗ್ಬಂಧನಕ್ಕೊಳಗಾದ ಘಟನೆ ಅತ್ಯಂತ ಖಂಡನೀಯ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಂವಿಧಾನಿಕ ಹುದ್ದೆಯಾದ ವಿಧಾನ ಪರಿಷತ್ ವಿಪಕ್ಷ ನಾಯಕರು ಹಾಗೂ ಶೋಷಿತ ಸಮುದಾಯಗಳ ಪ್ರಬಲ ಧ್ವನಿಯಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಕಲುಬುರಗಿ ಚಿತ್ತಾಪುರದ ಅತಿಥಿ ಗೃಹದಲ್ಲಿ ಕಾಂಗ್ರೆಸಿನ ಗೂಂಡಾ ಬೆಂಬಲಿಗರಿಂದ ದಿಗ್ಬಂಧನಕ್ಕೊಳಗಾದ ಘಟನೆ ಅತ್ಯಂತ ಖಂಡನೀಯ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ವಿಪಕ್ಷದ ನಾಯಕರೊಬ್ಬರಿಗೆ ರಕ್ಷಣೆ ನೀಡಲಾಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಬಂದೊದಗಿದೆ ಎಂದರೆ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಯ ರಕ್ಷಣೆಯನ್ನು ನಿರೀಕ್ಷಿಸುವುದು ಹೇಗೆ? ಕಾಂಗ್ರೆಸಿನ ಗೂಂಡಾ ವರ್ತನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದ್ದು ಪ್ರಜಾಪ್ರಭುತ್ವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಎಲ್ಲ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಅದನ್ನು ಸ್ವೀಕರಿಸಲು ಸಾಧ್ಯವಿಲ್ಲದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು. ಅದು ಬಿಟ್ಟು ಕಾಂಗ್ರೆಸಿನ ಮಂತ್ರಿಗಳು ತಮ್ಮ ಗೂಂಡಾ ಪಡೆಯನ್ನು ಕಳುಹಿಸಿ ಬಿಜೆಪಿ ನಾಯಕರನ್ನು ಬೆದರಿಸಲು ಯತ್ನಿಸಿದರೆ ಅದಕ್ಕೆ ಹೆದರುವವರು ಯಾರೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ರವರು ಇದನ್ನು ಗಂಭೀರವಾಗಿ ಪರಿಗಣಿಸಿ ಘಟನೆಗೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದರು.