ದೇಶ ಭಕ್ತ ಸಂಘಟನೆ ಮಂಗಳೂರು ವತಿಯಿಂದ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್ ಬಳಿಯಿಂದ ಪಿವಿಎಸ್‌ ಬಳಿಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಬುಧವಾರ ಆಯೋಜಿಸಿದ ‘ತಿರಂಗ ಯಾತ್ರೆ’ಗೆ ಚಾಲನೆ

ಮಂಗಳೂರು: ಹಿರಿಯರ ತ್ಯಾಗ ಬಲಿದಾನದಿಂದ ದೇಶ ಸ್ವಾತಂತ್ರ್ಯಗೊಂಡು ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಅವರ ತ್ಯಾಗ ನಾವು ಎಂದೂ ಮರೆಯಬಾರದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

ದೇಶ ಭಕ್ತ ಸಂಘಟನೆ ಮಂಗಳೂರು ವತಿಯಿಂದ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್ ಬಳಿಯಿಂದ ಪಿವಿಎಸ್‌ ಬಳಿಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಬುಧವಾರ ಆಯೋಜಿಸಿದ ‘ತಿರಂಗ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.

ದ.ಕ. ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಈ ದೇಶ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ನಮ್ಮ ಜವಾಬ್ದಾರಿಯೂ ಹೆಚ್ಚು ಇದೆ ಎಂದರು.

ದೇಶದ ಮೂಲೆ ಮೂಲೆಗಳಲ್ಲಿ ತಿರಂಗ ರಾರಾಜಿಸಬೇಕು. ಪ್ರತೀ ವಿದ್ಯಾರ್ಥಿಯ ಕೈಯಲ್ಲಿ ತಿರಂಗ ಇರಬೇಕು. ಪ್ರತೀ ಹೃದಯ, ಮನೆ, ಹಳ್ಳಿಗಳಲ್ಲಿ ರಾಷ್ಟ್ರ ಭಕ್ತಿ ಜಾಗೃತವಾಗಬೇಕು ಎಂದರು.

ಉಪನ್ಯಾಸ ನೀಡಿದ ಬಿಜೆಪಿ ಮುಖಂಡ, ವಾಗ್ಮಿ ವಿಕಾಸ್‌ ಪುತ್ತೂರು ಮಾತನಾಡಿ, ಇಂದು ಭಾರತ ವಿಶ್ವದಲ್ಲೇ ಮಾದರಿ ಪ್ರಜಾಪ್ರಭುತ್ವವಾಗಿ ಬೆಳೆದು ನಿಂತಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವ ಸಮೂಹ ಸ್ವಾತಂತ್ರ್ಯಕ್ಕೆ ದೊಡ್ಡ ಅಡಿಪಾಯ ಹಾಕಿತ್ತು ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್‌ ಕಿಣಿ ಅವರನ್ನು ಸಮ್ಮಾನಿಸಲಾಯಿತು. ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಕಾರ್ಯಕ್ರಮದ ಸಂಚಾಲಕ ಅಶ್ವಿತ್‌ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ಸುಧೀರ್‌ ಶೆಟ್ಟಿ ಕಣ್ಣೂರು, ರವಿಶಂಕರ್‌ ಮಿಜಾರ್‌, ನಿತಿನ್‌ ಕುಮಾರ್‌, ರಮೇಶ್‌ ಕಂಡೆಟ್ಟು, ಕೆ.ಮೋನಪ್ಪ ಭಂಡಾರಿ, ನಂದನ್‌ ಮಲ್ಯ, ಮಹೇಶ್‌ ಜೋಗಿ, ಸುಜಿತ್‌ ಪ್ರತಾಪ್‌, ರಮೇಶ್‌ ಹೆಗ್ಡೆ, ಲಲ್ಲೇಶ್‌ ಕುಮಾರ್‌, ಪೂರ್ಣಿಮಾ, ಶಕೀಲಾ ಕಾವ, ಭಾನುಮತಿ ಮತ್ತಿತರರು ಇದ್ದರು.ಸಭಾ ಕಾರ್ಯಕ್ರಮದ ಬಳಿಕ ರಾಜಾಜಿ ಪಾರ್ಕ್‌ನಿಂದ ಮಂಜೇಶ್ವರ ಗೋವಿಂದ ಪೈ ವೃತ್ತ(ನವಭಾರತ) ವರೆಗೆ ತಿರಂಗ ಯಾತ್ರೆ ನಡೆಯಿತು.