ಮಂಗಳೂರು ನಗರದ ಕೆಲವೆಡೆ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಗೊಂಡು ಹಲವರು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಬಿಜೈ 31ನೇ ವಾರ್ಡಿನ ನೋಡು ಬಟ್ಟಗುಡ್ಡೆ ಪರಿಸರದ ರಾಮಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸಾರ್ವಜನಿಕರ, ಪಾಲಿಕೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.

ಮಂಗಳೂರು: ಮಂಗಳೂರು ನಗರದ ಕೆಲವೆಡೆ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಗೊಂಡು ಹಲವರು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಬಿಜೈ 31ನೇ ವಾರ್ಡಿನ ನೋಡು ಬಟ್ಟಗುಡ್ಡೆ ಪರಿಸರದ ರಾಮಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸಾರ್ವಜನಿಕರ, ಪಾಲಿಕೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನೋಡು ಬಟ್ಟಗುಡ್ಡೆ ಪರಿಸರದ ಕೆಳಭಾಗದಲ್ಲಿ ಕುಡಿಯುವ ನೀರಿಗೆ ಡ್ರೈನೇಜ್ ನೀರು ಸೇರಿಕೊಂಡು ಹಲವು ಮನೆಗಳಿಗೆ ಸರಬರಾಜಾಗಿದೆ ಎಂದು ದೂರು ಬಂದಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇನೆ. ಸದ್ಯ ಅಧಿಕಾರಿಗಳು ನಿನ್ನೆಯಿಂದ ಸ್ಥಳೀಯ ಮನೆಗಳ ನಲ್ಲಿಯಲ್ಲಿ ಬರುತ್ತಿರುವ ನೀರಿನ ಮಾದರಿಯನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಪರೀಕ್ಷೆಗೆ ಒಳಪಡಿಸಿ ಎಲ್ಲಾ ರೀತಿಯ ಬಳಕೆಗೆ ಯೋಗ್ಯವಿರುವುದನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ಧೃಡಪಡಿಸಿದ್ದಾರೆ. ಹಾಗಾಗಿ ಈಗಾಗಲೇ ಈ ಭಾಗದ ಮನೆಗಳ, ಅಪಾರ್ಟ್‌ಮೆಂಟ್‌ಗಳ ಟಾಂಕಿಯಲ್ಲಿ ಸಂಗ್ರಹವಾಗಿರುವ ನೀರನ್ನು ಸಾರ್ವಜನಿಕರು ವಿಸರ್ಜಿಸಿ ಶುದ್ಧ ನೀರನ್ನು ಸಂಗ್ರಹ ಮಾಡಿಕೊಳ್ಳಬೇಕು. ಮುಂದಕ್ಕೆ ನೀರಿನ ಶುದ್ಧತೆಯಲ್ಲಿ ಯಾವುದೇ ರೀತಿಯ ಸಂದೇಹವಿದ್ದರೂ ಕೂಡಲೇ ನನ್ನ ಸಹಿತ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ಶಾಸಕರು ಸ್ಥಳೀಯರಲ್ಲಿ ಮನವಿ ಮಾಡಿದರು.

ಇದು ಕುಡಿಯುವ ನೀರಿನ ವಿಷಯವಾಗಿದ್ದು ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರಿಗಳು ಮುಂದಿನ ಕೆಲ ದಿನಗಳವರೆಗೆ ಈ ಭಾಗದ ಮನೆಗಳಿಗೆ ಭೇಟಿ ನೀಡಿ ಅಗತ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಸ್ಥಳೀಯರಾದ ಪ್ರಶಾಂತ್ ಆಳ್ವ, ನಾರಾಯಣ್, ಸಂತೋಷ ಉಳ್ಳಾಲ್, ರಾಜೇಶ್ ಕಿಣಿ, ದೀಪಿಕಾ ಮನೋಜ್, ಸುಜಿತ್, ಅಶ್ವಿನ್, ಋತ್ವಿಕ್ ಕದ್ರಿ, ಅನಂತ್ ಮಲ್ಯ, ಅಶೋಕ್ ಬಂಗೇರ, ಎರೆಸ್ಟಿನ್, ಪಾಲಿಕೆಯ ಎಇಇ ನಾಗರಾಜ್, ಎಇಇ ಶಿವಲಿಂಗಯ್ಯ, ಕೆಯುಐಡಿಎಫ್‌ಸಿ ಅಧಿಕಾರಿಗಳಾದ ಸುರೇಶ್, ಖಾದರ್, ಪುನೀತ್, ಮಿಥುನ್, ಜೆ. ಇ ನಿತ್ಯಾನಂದ, ಕುಡ್ಸೆಂಪ್ ನ ರಿಚರ್ಡ್, ಜಯಪ್ರಕಾಶ್, ಪ್ರಶಾಂತ್ ಮತ್ತಿತರರು ಇದ್ದರು.