ಮಹಿಳೆಯನ್ನ ಕೀಳಾಗಿ ಬಿಂಬಿಸಿದ ವೈದಿಕ ಗ್ರಂಥ ಸುಡಬೇಕು: ಆರ್.ಬಿ. ತಿಮ್ಮಾಪೂರ

| Published : Oct 06 2025, 01:01 AM IST

ಸಾರಾಂಶ

ಮನುವಾದಿಗಳು ಹೆಣ್ಣು ಮಕ್ಕಳಿಗೆ ಬಹಳ ಶೋಷಣೆ ಮಾಡಿದ್ದಾರೆ, ಕೆಲವು ವೈದಿಕ ಗ್ರಂಥಗಳಲ್ಲಿ ಮಹಿಳೆ ಬಗ್ಗೆ ಕೀಳಾಗಿ ಬಿಂಬಿಸಲಾಗಿದೆ. ಇಂಥ ಗ್ರಂಥಗಳನ್ನು ಸುಟ್ಟು ಹಾಕಬೇಕು, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಧರ್ಮ ಬೇಕು, ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜ ಬೇಕು, ಅಂದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮನುವಾದಿಗಳು ಹೆಣ್ಣು ಮಕ್ಕಳಿಗೆ ಬಹಳ ಶೋಷಣೆ ಮಾಡಿದ್ದಾರೆ, ಕೆಲವು ವೈದಿಕ ಗ್ರಂಥಗಳಲ್ಲಿ ಮಹಿಳೆ ಬಗ್ಗೆ ಕೀಳಾಗಿ ಬಿಂಬಿಸಲಾಗಿದೆ. ಇಂಥ ಗ್ರಂಥಗಳನ್ನು ಸುಟ್ಟು ಹಾಕಬೇಕು, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಧರ್ಮ ಬೇಕು, ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜ ಬೇಕು, ಅಂದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮುಧೋಳ ತಾಲೂಕು ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಬಾಲ್ಯದಿಂದ ಬದುಕಿನವರೆಗೆ ಸೇವೆ ಮಾಡುವ ಗುಣ ಹೊಂದಿದ್ದಾಳೆ. ಮಾನವ ಕುಲದಲ್ಲಿ ಹೆಣ್ಮಕ್ಕಳು ಶ್ರೇಷ್ಠರಾಗಿದ್ದಾರೆ. ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಇಡೀ ಕುಟುಂಬ ಶಿಕ್ಷಣವಂತಾಗುತ್ತದೆ. ಜ್ಯೋತಿಬಾಯಿ ಪುಲೆಯವರು ಸಾಕಷ್ಟು ಅವಮಾನ ಸಹಿಸಿಕೊಂಡು ಸಾಧನೆ ಮಾಡಿದರು. ಇಂದಿನ ಯುವ ಸಮುದಾಯಕ್ಕೆ ಹಬ್ಬದ ಮಹತ್ವ ತಿಳಿಸಿ ಕೊಡುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್.ಬಾಲಾಜಿ ಮಾತನಾಡಿ, ಕಲಾವಿದರಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮಾಸಾಶನವಿದೆ. ಕರ್ನಾಟಕ ಸರ್ಕಾರ ಕಲಾವಿದರಿಗೆ ₹೨೫೦೦ ಮಾಸಾಶನ ನೀಡಲು ಒತ್ತಾಯಿಸಿದರು.

ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಮಾತನಾಡಿ, ಜಾನಪದ ಸಂಸ್ಕೃತಿ ಭಾರತೀಯರ ಮೂಲ ಜೀವಾಳವಾಗಿದ್ದು, ಅದರಲ್ಲಿ ಕನ್ನಡ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದರು.

ಈಶ್ವರಿ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಕ್ಕ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ರತ್ನಕ್ಕ ತಳೇವಾಡ, ಬಿ.ವ್ಹಿ. ಹಲಕಿ, ಮುಧೋಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದುಗೌಡ ಪಾಟೀಲ, ಕೆಎಂಎಫ್ ಮಾಜಿ ನಿರ್ದೇಶಕ ಸಂಜಯ ತಳೇವಾಡ, ಕರ್ನಾಟಕ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ, ಲೋಕಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶೋಕ ಕಿವಡಿ, ಗೋವಿಂದಪ್ಪ ಕೌಲಗಿ, ಭೀಮನಗೌಡ ಪಾಟೀಲ, ಮಹೇಶ ಪೂಜಾರ, ಉಪತಹಶೀಲ್ದಾರ ಬಿ.ಎಸ್.ರಂಗಣ್ಣವರ, ಸಪ್ತಸ್ವರ ಸಂಸ್ಥೆ ಅಧ್ಯಕ್ಷೆ ಜ್ಯೋತಿ ಪಾಟೀಲ, ಅನಿತಾ ಪಾಟೀಲ, ಲೋಕಾಪುರ ವಲಯದ ಮಹಿಳಾ ಘಟಕದ ಅಧ್ಯಕ್ಷ ರೇಖಾ ನರಹಟ್ಟಿ, ರಾಜೇಶ್ವರಿ ವಿರಕ್ತಮಠ, ಡಾ.ನಿರ್ಮಲಾ ಮಲಘಾಣ, ತಾಲೂಕಾಧ್ಯಕ್ಷ ಲಕ್ಷ್ಮೀ ಹಾರೂಗೊಪ್ಪ, ಡಾ.ಮೇಘಾ ಮುಳ್ಳೂರ, ಕಾಳಮ್ಮಾ ಕೇದಾರಿ, ಆರ್.ಬಿ. ನಬಿವಾಲೆ, ಕನ್ನಡ ಜಾನಪದ ಪರಿಷತ್ ವಲಯ ಮಹಿಳಾ ಘಟಕದ ಸದಸ್ಯರು, ಮಹಿಳೆಯರು, ವಿವಿಧ ಕಲಾವಿದರು, ಕನ್ನಡ ಪ್ರೇಮಿಗಳು, ಸಾಹಿತಿಗಳು, ಸ್ಥಳೀಯರು ಇದ್ದರು.

ನನಗೆ ನಾಡೋಜ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಒಲಿದರೂ ದಲಿತ ಮಹಿಳೆ ಎನ್ನುವ ಕಾರಣಕ್ಕೆ ಸರಿಯಾದ ಗೌರವ ಸಿಗಲಿಲ್ಲ. ಆದರೆ ಕನ್ನಡ ಜಾನಪದ ಪರಿಷತ್‌ ನನಗೆ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದು ಬಹಳ ಸಂತಸ ತಂದಿದೆ, ಸಾಕಷ್ಟು ಕಲ್ಲು, ಮುಳ್ಳು ತುಳಿದು ನೋವು ಉಂಡು ಇಲ್ಲಿಯವರೆಗೆ ಸಾಧನೆ ಮಾಡಿದ್ದೇನೆ. ಈಗ ಸಮಾಜ ಗೌರವಿಸುತ್ತಿರುವುದಕ್ಕೆ ನನ್ನ ವೃತ್ತಿ ಬದುಕು ಸಂತಸ ತಂದಿದೆ.

- ಯಲ್ಲವ್ವ ರೊಡ್ಡಪ್ಪನವರ ಸಮ್ಮೇಳನ ಸರ್ವಾಧ್ಯಕ್ಷೆ