ಮೇಲ್ವರ್ಗ-ಕೆಳವರ್ಗ ಎಂಬ ಭೇದದ ನಡುವೆ ಕುದ್ಮುಲ್ ರಂಗರಾವ್ ದಲಿತರ ಏಳಿಗೆಗೆ ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಅಹರ್ನಿಶಿ ದುಡಿದು ಸಮಾಜಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ರಂಗರಾವ್ ಅವರ ದಲಿತ ಪರ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ವಿರೋಧಗಳಿದ್ದರೂ ಕೂಡ ಅದನ್ನು ಲೆಕ್ಕಿಸದೆ, ದಲಿತರಿಗೆ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ತೆರೆದು, ಉದ್ಯೋಗಗಳನ್ನು ಒದಗಿಸಿ ಅವರ ಬದುಕಿಗೆ ಬೆಳಕಾದವರು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಮಂಗಳೂರು: ಮೇಲ್ವರ್ಗ-ಕೆಳವರ್ಗ ಎಂಬ ಭೇದದ ನಡುವೆ ಕುದ್ಮುಲ್ ರಂಗರಾವ್ ದಲಿತರ ಏಳಿಗೆಗೆ ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಅಹರ್ನಿಶಿ ದುಡಿದು ಸಮಾಜಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ರಂಗರಾವ್ ಅವರ ದಲಿತ ಪರ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ವಿರೋಧಗಳಿದ್ದರೂ ಕೂಡ ಅದನ್ನು ಲೆಕ್ಕಿಸದೆ, ದಲಿತರಿಗೆ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ತೆರೆದು, ಉದ್ಯೋಗಗಳನ್ನು ಒದಗಿಸಿ ಅವರ ಬದುಕಿಗೆ ಬೆಳಕಾದವರು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಆದರ್ಶ, ಸಮಾಜಮುಖಿ ಚಿಂತನೆಗಳನ್ನು ಮುಂದಿನ ಯುವ ತಲೆಮಾರುಗಳಿಗೆ ತಲುಪಿಸುವ ನಿಟ್ಟಿನಲ್ಲಿ, ನಗರದ ಬಾಬುಗುಡ್ಡೆಯಲ್ಲಿರುವ ರಂಗರಾವ್ ಅವರ ಸಮಾಧಿ ಶೀಘ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ಕಾರ್ಯ ವಿಳಂಬವಾಗಬಾರದು. ಮಹಾನಗರಪಾಲಿಕೆ ವತಿಯಿಂದ ಪರಿಶಿಷ್ಟ ಜಾತಿಯ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವಂತಾಗಬೇಕು. ಅವರ ಆದರ್ಶ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಹೋರಾಡುವ ದೀನದಲಿತರ ಅಭಿವೃದ್ಧಿಗಾಗಿ ರಂಗರಾಯರು ತಮ್ಮ ಇಡೀ ಜೀವನ ಮುಡಿಪಾಗಿಟ್ಟರು. ಯುವಜನರ ಸಬಲೀಕರಣಕ್ಕೆ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ನೀಡಿದ ಕೊಡುಗೆ ಅಪಾರ ಎಂದರು.ಗೋಕರ್ಣನಾಥ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ ಉಪನ್ಯಾಸ ನೀಡಿ ಮಾತನಾಡಿ, 19 ನೇ ಶತಮಾನದಲ್ಲಿಯೇ ಶಾಲೆಗಳನ್ನು ತೆರೆದು ಶಾಲಾ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರೋತ್ಸಾಹಿಸಲು ಬಿಸಿಯೂಟದ ವ್ಯವಸ್ಥೆ ಪ್ರಾರಂಭಿಸಿದ್ದರು. ದೀನ ದಲಿತರ ಉದ್ಧಾರವೇ ದೇಶದ ಉದ್ಧಾರ ಎಂಬ ಕಲ್ಪನೆಯನ್ನು ಮಾಡಿಕೊಂಡವರು ಕುದ್ಮುಲ್ ರಂಗರಾಯರು ಎಂದರು.ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತ್ತರರು ಇದ್ದರು.
ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು.