ವೀರ ವನಿತೆ ಓಬವ್ವ ಶೌರ್ಯ, ಸಾಹಸದ ಪ್ರತೀಕ : ನಾಗರಾಜು

| Published : Nov 12 2025, 01:15 AM IST

ವೀರ ವನಿತೆ ಓಬವ್ವ ಶೌರ್ಯ, ಸಾಹಸದ ಪ್ರತೀಕ : ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಸ, ಶೌರ್ಯದ ಪ್ರತೀಕವಾಗಿರುವ ವೀರ ವನಿತೆ ಓಬವ್ವನವರ ಆದರ್ಶಗಳು ಇಂದಿನ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ನಾಗರಾಜು ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಸಾಹಸ, ಶೌರ್ಯದ ಪ್ರತೀಕವಾಗಿರುವ ವೀರ ವನಿತೆ ಓಬವ್ವನವರ ಆದರ್ಶಗಳು ಇಂದಿನ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ನಾಗರಾಜು ತಿಳಿಸಿದರು.

ನಗರದ ತಾಲೂಕು ಆಡಳಿತದ ವತಿಯಿಂದ ಆಡಳಿತ ಸೌಧ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವೀರವನಿತೆ ಓಬವ್ವ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಬಡ ಕುಟುಂಬದಲ್ಲಿ ಜನಿಸಿದ ಓಬವ್ವನವರು ಚಿಕ್ಕವಯಸ್ಸಿನಲ್ಲಿಯೇ ವೀರಾವೇಶ, ಸಾಹಸಗಾರ್ತಿಯಾಗಿದ್ದರು. ನಂತರ ಚಿತ್ರದುರ್ಗ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನನ್ನು ಮದುವೆಯಾದರು. ಕೋಟೆ ಕಾಯುವ ಸಂದರ್ಭದಲ್ಲಿ ಹೈದರಾಲಿಯ ಆಕ್ರಮಣದ ಸಮಯದಲ್ಲಿ ಒನಕೆಯಿಂದ ಒಂಟಿಯಾಗಿ ಶತ್ರುಗಳನ್ನು ಎದುರಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡುವ ಮೂಲಕ ಕೋಟೆಯನ್ನು ರಕ್ಷಿಸಿದರು. ಚಿತ್ರದುರ್ಗದಲ್ಲಿ ಇಂದಿಗೂ ಅವರ ನೆನಪಾಗಿ ಓಬವ್ವನ ಕಿಂಡಿಯನ್ನು ನಾವು ಕಾಣಬಹುದು. ಹಾಗೆಯೇ ಅಲ್ಲಿ ವೀರವನಿತೆಯ ಕ್ರೀಡಾಂಗಣ, ಆಟೋಟಗಳು ಸಹ ಇವೆ. ಗಟ್ಟಿಗಿತ್ತಿ, ಧೈರ್ಯಶಾಲಿಯಾಗಿದ್ದ ಓಬವ್ವನ ಬದುಕು, ಸಾಹಸ, ವೀರಗಾಥೆಯನ್ನು ಸರ್ಕಾರ ಇಂದಿನ ಪಠ್ಯಕ್ರಮದಲ್ಲಿ ಅಳವಡಿಸಿದರೆ ಅನುಕೂಲವಾಗಲಿದೆ ಎಂದರು. ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್ ಮಾತನಾಡಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಸಮಾಜ ಕಲ್ಯಾಣ ಇಲಾಖೆಯ ತ್ರಿವೇಣಿ, ಜೈ ಭೀಮ್ ಛಲವಾದಿ ಮಹಾಸಭೆ ರಾಜ್ಯಾಧ್ಯಕ್ಷ ಚನ್ನವೀರಯ್ಯ, ತಾ. ಅಧ್ಯಕ್ಷ ಬಜಗೂರು ಮಂಜುನಾಥ್, ಗೌರವಾಧ್ಯಕ್ಷ ಪ್ರಭುಸ್ವಾಮಿ, ನಗರಾಧ್ಯಕ್ಷ ಶಿವಲಿಂಗಮೂರ್ತಿ, ಮುಖಂಡ ಕಂಚಾಘಟ್ಟ ಸುರೇಶ್, ಗೋವಿಂದರಾಜು, ಶ್ರೀನಿವಾಸ್ ಮತ್ತಿತರರಿದ್ದರು.