ಸಾರಾಂಶ
ಕನ್ನಡಪ್ರಭ ವಾರ್ತೆ ನರಗುಂದ
ತಾಲೂಕಿನ ರೈತರಿಗೆ ಬೆಳೆ ಹಾನಿ ವಿತರಣೆಯಲ್ಲಿ ತಾರತಮ್ಯ ಮಾಡಿದ್ದು, ಸರ್ಕಾರ ಆದಷ್ಟು ಶೀಘ್ರ ಸಮರ್ಪಕ ಬೆಳೆ ಹಾನಿ ವಿತರಣೆ ಮಾಡಲು ಮುಂದಾಗಬೇಕು ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಗ್ರಹಿಸಿದರು.ಅವರು 3229ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದರು.2023-24ನೇ ಸಾಲಿನಲ್ಲಿ ತಾಲೂಕಿನ ರೈತ ಸಮುದಾಯ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದ ಮುಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗಿದೆ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿ ಹೋದವು, ಆ ನಂತರ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮಾಹಿತಿ ಸಂಗ್ರಹ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದರು. ಕೇಂದ್ರ ಸರ್ಕಾರ 8 ತಿಂಗಳ ನಂತರ ರಾಜ್ಯ ಸರ್ಕಾರಕ್ಕೆ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತ್ಯಮ ಮಾಡಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ 25 ಸಾವಿರಕ್ಕಿಂತ ಹೆಚ್ಚು ರೈತರಿಗೆ ಸರ್ಕಾರ ಬೆಳೆ ಹಾನಿ ವಿತರಣೆ ಮಾಡಬೇಕಾಗಿತ್ತು. ಆದರೆ, ಸರ್ಕಾರ ಕೇವಲ 12500 ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ವಿತರಣೆ ಮಾಡಿದೆ. ಪರಿಹಾರ ಬಾರದ ರೈತರು ಪ್ರತಿ ದಿನ ಕೃಷಿ ಹಾಗೂ ಕಂದಾಯ ಇಲಾಖೆಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ, ಸರ್ಕಾರ ಉಳಿದ ಎಲ್ಲ ರೈತರಿಗೆ ಬೆಳೆ ಹಾನಿ ವಿತರಣೆ ಮಾಡಲು ಮುಂದಾಗಬೇಕು. ಒಂದು ವೇಳೆ ಸರ್ಕಾರ ಪರಿಹಾರ ವಿತರಣೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಹನುಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಅರ್ಜುನ ಮಾನೆ, ಮಲ್ಲೇಶಪ್ಪ ಅಣ್ಣಿಗೇರಿ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಬಾವಿ, ಯಲ್ಲಪ್ಪ ಚಲವಣ್ಣವರ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.