ವೀರಬಸಪ್ಪ ಸ್ವಾಮಿ ಪವಾಡ ಪುರುಷ: ಸುತ್ತೂರುಶ್ರೀ

| Published : Mar 26 2025, 01:32 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಸುತ್ತೂರು ಮಠಾಧೀಶ ದೇಶಿಕೇಂದ್ರಸ್ವಾಮೀಜಿ ಉದ್ಘಾಟಿಸಿದರು.ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಶ್ರೀಗಳು ಇದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವೀರಬಸಪ್ಪ ಸ್ವಾಮಿ ಅವರೇ ತೋಡಿದ್ದ ಕೊಳದಲ್ಲಿ ಬರದ ಬೇಸಿಗೆಯಲ್ಲೂ ನೀರು ಇರುತ್ತೇ ಎಂದರೆ ವೀರಬಸಪ್ಪ ಸ್ವಾಮಿ ತಪಸ್ವಿ ಹಾಗೂ ಪವಾಡ ಪುರುಷರು ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಮಾಡ್ರಹಳ್ಳಿ ಗ್ರಾಮದ ವೀರಬಸಪ್ಪ ಸ್ವಾಮಿ ದೇವಸ್ಥಾನ ಪುನರ್‌ ಪ್ರತಿಷ್ಠಾಪನೆ, ಪ್ರಭಾವಳಿ, ವಿಮಾನ ಗೋಪುರ, ಕಲಶಗಳ ಸ್ಥಾಪನೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಬರ ಬಂದಾಗ, ಬೇಸಿಗೆ ಸಮಯದಲ್ಲೂ ಕೊಳದಲ್ಲಿ ನೀರು ಖಾಲಿ ಯಾಗುವುದಿಲ್ಲ ಎಂದರೆ ಇದು ನಂಬಿಕೆ ಎಂದರು. ವೀರಬಸಪ್ಪಸ್ವಾಮಿ ಬಗ್ಗೆ ಈ ಭಾಗದ ಜನರಿಗೆ ನಂಬಿಕೆ ಇದ್ದಂಗೆ ವೀರಬಸಪ್ಪ ಸ್ವಾಮಿಗೂ ಈ ಭಾಗದ ಜನರ ಮೇಲೆ ಆಶೀರ್ವಾದ ಇತ್ತು.ವೀರಬಸಪ್ಪ ದೇವಸ್ಥಾನದ ಸುತ್ತ ಹಸಿರು ವಾತಾವರಣ ಆಗಲಿ ಎಂದರು. ಕನಕಪುರ ದೇಗುಲ ಮಠಾಧೀಶ ಚನ್ನಬಸವಸ್ವಾಮೀಜಿ ಮಾತನಾಡಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಶರಣರು ನಡೆದಿದ್ದಾರೆ. ಅದರಲ್ಲೂ ಗುಂಡ್ಲುಪೇಟೆ ಪ್ರಕೃತಿ ಹಾಗೂ ಭಕ್ತಿಗೆ ಪ್ರಥಮ ಸ್ಥಾನದಲ್ಲಿದೆ. ಶರಣರ ಹಾದಿಯಲ್ಲಿ ನಡೆವ ಕೆಲಸ ಆಗಬೇಕಿದೆ ಎಂದರು.

ಸಿದ್ಧಗಂಗ ಕಿರಿಯ ಮಠಾಧೀಶ ಶಿವ ಸಿದ್ದೇಶ ಮಹಾಸ್ವಾಮೀಜಿ ಮಾತನಾಡಿ, ಮಾಡುವ ಕೆಲಸಗಳೆಲ್ಲ ಸೇವೆಯಲ್ಲ. ಸೇವೆಗೆ ಪ್ರತಿಫಲ ಬಯಸದೆ ಇರೋದೇ ಸೇವೆ. ಮನುಷ್ಯನಿಗೆ ನೆಮ್ಮದಿ ಹಾಗೂ ಸಂಸ್ಕಾರ ಬೇಕು ಎಂದರು. ಇತ್ತೀಚೆಗೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಮನುಷ್ಯನಿಗೆ ಸಂಸ್ಕಾರ ಹೋದರೆ ಎಲ್ಲವನ್ನು ಕಳೆದುಕೊಂಡಂತೆ. ಸಂಸ್ಕಾರ ಬಿತ್ತುವ ಕೆಲಸ ಮತ್ತಷ್ಟು ಆಗಬೇಕು.ವಿಭೂತಿ ಮಹತ್ವ, ರುದ್ರಾಕ್ಷಿ ಮೋಹ ಮಕ್ಕಳಿಗೆ ಕಲಿಸಬೇಕು. ಮಕ್ಕಳಲ್ಲಿ ಲಿಂಗದ ಬದಲು ಮೊಬೈಲ್‌ ಬಳಕೆ ಹೆಚ್ಚಾಗುತ್ತಿದೆ ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ವೀರಬಸಪ್ಪಸ್ವಾಮಿ ತೋಡಿದ ಕೊಳದಲ್ಲಿ ಬರದಲ್ಲೂ ನೀರು ಇರುತ್ತದೆ ಎಂದರೆ ಪವಾಡವಲ್ಲವೇ?ದೇವಸ್ಥಾನದ ಸುತ್ತಲೂ ಗಿಡ ಬೆಳೆಸುವ ಕೆಲಸ ಮಾಡಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವನೂರು ಮಠಾಧೀಶ ಮಹಂತಸ್ವಾಮೀಜಿ ಆಶೀರ್ವಚನ ನೀಡಿದರು. ಪಡಗೂರು ಮಠಾಧೀಶ ಶರಣ ವೀರಬಸಪ್ಪ ಸ್ವಾಮಿ ಗ್ರಂಥ ಬಿಡುಗೊಳಿಸಿ ಮಾತನಾಡಿದರು. ಮಾಡ್ರಹಳ್ಳಿ ನಾಗೇಂದ್ರ ಸ್ವಾಗತಿಸಿದರು. ಹೂರದಹಳ್ಳಿ ಪ್ರಸಾದ್‌ ನಿರೂಪಿಸಿದರು.ಚಂದ್ರು ಮಾಡ್ರಹಳ್ಳಿ ವಂದಿಸಿದರು. ಅಮೂಲ್ಯ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಹಂಗಳ ಹಳ್ಳದ ಮಠಾಧೀಶ ಜಡೇಸ್ವಾಮೀಜಿ, ಹರವೆ ಮಠಾಧೀಶ ಸರ್ಪಭೂಷಣಸ್ವಾಮೀಜಿ, ಬಿಡುಗಲು ಪಡುವಲು ಮಠಾಧೀಶ ಮಹದೇವಸ್ವಾಮೀಜಿ, ಚಿಕ್ಕತುಪ್ಪೂರು ಚನ್ನವೀರಸ್ವಾಮೀಜಿ, ಮರಿಯಾಲ ಮಠಾಧೀಶ ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿ, ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ,ಮೈಸೂರು, ಚಾಮರಾಜನಗರ ಜಿಲ್ಲೆಯ ಮಠಾಧೀಶರು,ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಸೇರಿದಂತೆ ಸಾವಿರಾರು ಜನರು ಇದ್ದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಲಿಂಗದೀಕ್ಷೆ

ಮಾಡಿಸಿ: ಬಸವಾನಂದ ಸ್ವಾಮೀಜಿ

ಮಕ್ಕಳಿಗೆ ಚಿಕ್ಕಂದಿನಿಂದಲೇ ಲಿಂಗದೀಕ್ಷೆ ಮಾಡಿಸಿ, ವಿಭೂತಿ ಹಣೆಗೆ ಹಚ್ಚಿಸುವುದನ್ನು ಕಲಿಸಿದರೆ ಮುಂದೆ ಅತ್ಯಾಚಾರಿ ಆಗಲ್ಲ. ಭ್ರಷ್ಟಾಚಾರಿನೂ ಆಗಲ್ಲ ಎಂದು ಧಾರವಾಡ ಜಿಲ್ಲೆಯ ಮನಗುಂಡಿ ಗುರುಬಸವ ಮಹಾಮನೆ ಪೀಠಾಧೀಶ ಬಸವಾನಂದಸ್ವಾಮೀಜಿ ಹೇಳಿದರು.

ತಾಲೂಕಿನ ಮಾಡ್ರಹಳ್ಳಿ ಗ್ರಾಮದ ವೀರಬಸಪ್ಪ ಸ್ವಾಮಿ ದೇವಸ್ಥಾನ ಪುನರ್‌ ಪ್ರತಿಷ್ಠಾಪನೆ,ಪ್ರಭಾವಳಿ,ವಿಮಾನ ಗೋಪುರ,ಕಲಶಗಳ ಸ್ಥಾಪನೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿ ತಂದೆ,ತಾಯಿ ತಮ್ಮ ಮಕ್ಕಳಿಗೆ ಚಿಕ್ಕನಿಂದಲೇ ಹಣೆಗೆ ವಿಭೂತಿ ಹಾಕಬೇಕು,ರುದ್ರಾಕ್ಷಿ ಕಟ್ಟಬೇಕು ಎಂದರು. ದೇವಸ್ಥಾನ ಕಟ್ಟಿ ಬೇಡ ಅನ್ನಲ್ಲ, ಆದರೆ ಗುಡಿ ಕಟ್ಟಿದ್ದು ಸಾರ್ಥಕವಾಗಬೇಕಾದರೆ ಪೂಜೆಯ ಜೊತೆಗೆ ಪ್ರಾರ್ಥನೆ ಕಡ್ಡಾಯವಾಗಿ ಮಾಡಬೇಕು. ಶಾಲೆಗೆ ಶಿಕ್ಷಕ ಕುಡಿದು ಬಂದರೆ ಮಕ್ಕಳೇನು ಕಲಿಯಲು ಸಾಧ್ಯ ಎಂದರು. ಶಾಂತಿಗೆ ಬೆಲೆ, ಅಶಾಂತಿಗೆ ಬೆಲೆ ಇಲ್ಲ. ಜನರು ಕಚ್ಚಾಡದೆ, ನೆಮ್ಮದಿ ಜೀವನ ಸಾಗಿಸಲು ಶಾಂತಿ ಮೊದಲು ಬೇಕು. ಪ್ರಸ್ತುತ ಇಸ್ರೇಲ್‌, ಉಕ್ರೇನ್‌, ರಷ್ಯಾದ ಜನರಿಗೆ ನೆಮ್ಮದಿ ಇದೆಯಾ ಎಂದರು.

ಭಾರತೀಯ ಪರಂಪರೆ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಕಲಬುರ್ಗಿ, ಬೀದರ್‌ ಬಿಟ್ಟರೆ ಶರಣ ತತ್ವ ನೇರವಾಗಿ ಇರೋದು ಚಾಮರಾಜನಗರ ಹಾಗು ಮೈಸೂರು ಜಿಲ್ಲೆಯಲ್ಲಿದೆ ಎಂದರು. ಮೈಸೂರು ಭಾಗದ ಮಠ ಮಾನ್ಯಗಳು ೨೦ ನೇ ಶತಮಾನದಲ್ಲಿ ಶಾಲಾ,ಕಾಲೇಜು,ಹಾಸ್ಟೆಲ್‌ ಆರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿದರು.ಶಾಲಾ,ಕಾಲೇಜುಗಳಲ್ಲಿ ನೀರು,ಗಾಳಿ,ಆರೋಗ್ಯದ ಬಗ್ಗೆ ಅರಿವು ಬೇಕಿದೆ ಎಂದರು.