ಬ್ಯಾಡಗಿ ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಾಯ್ದುಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳ ತಾತ್ಕಾಲಿಕವಾಗಿ ಮುಚ್ಚುವಂತೆ ಜಾತ್ರಾ ಸಮಿತಿ ಸದಸ್ಯರು ಶುಕ್ರವಾರ ಲೋಕೋಪಯೋಗಿ ಮತ್ತು ಪುರಸಭೆಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬ್ಯಾಡಗಿ: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಾಯ್ದುಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳ ತಾತ್ಕಾಲಿಕವಾಗಿ ಮುಚ್ಚುವಂತೆ ಜಾತ್ರಾ ಸಮಿತಿ ಸದಸ್ಯರು ಶುಕ್ರವಾರ ಲೋಕೋಪಯೋಗಿ ಮತ್ತು ಪುರಸಭೆಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಬಿ. ಹುಚಗೊಂಡರ, ಬರುವ ಜ.28ರಂದು ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 71ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಎಂದಿನಂತೆ ಅಂದು ಬೆಳಗ್ಗೆ ಗುಗ್ಗಳ ಹಾಗೂ ಸಂಜೆ ಮಹಾರಥೋತ್ಸವ ಮುಖ್ಯರಸ್ತೆ ಮೂಲಕ ಸಂಚರಿಸಲಿದೆ. ಆದರೆ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ರಥದ ಚಕ್ರವು ಸರಾಗವಾಗಿ ಮುಂದೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಬಿದ್ದಿರುವಂತಹ ಗುಂಡಿಗಳ ಕೂಡಲೇ ಮುಚ್ಚುವಂತೆ ಆಗ್ರಹಿಸಿದರು.ಅಚಾತುರ್ಯಕ್ಕೆ ಕಾರಣವಾಗದಿರಿ: ಸಮಿತಿ ಗೌರವ ಕಾರ್ಯದರ್ಶಿ ಮಾಲತೇಶ ಅರಳೀಮಟ್ಟಿ ಮಾತನಾಡಿ, ಮಹಾರಥೋತ್ಸವದ ತೇರು ಕಟ್ಟಿಗೆಯಿಂದ ನಿರ್ಮಿಸಿದ್ದು ಏನಾದರೂ ಅವಘಡ ಸಂಭವಿಸಿದಲ್ಲಿ ಹಾನಿ ಆಗುವಂತಹ ಸಾಧ್ಯತೆ ಇದೆ. ಗುಂಡಿಗಳ ಸಮಸ್ಯೆ ಕೇವಲ ಮುಖ್ಯರಸ್ತೆಗೆ ಮಾತ್ರ ಸೀಮಿತವಲ್ಲ, ಬದಲಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೂ ರಸ್ತೆ ಹಾಳಾಗಿದ್ದು, ಸಾಕಷ್ಟು ತಗ್ಗು ಗುಂಡಿಗಳಿದ್ದು ಈ ಕುರಿತು ಶಾಸಕರು ಸೇರಿದಂತೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಕೂಡಲೇ ಎರಡೂ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ಯಾವುದೇ ಆತಂಕವಿಲ್ಲದೇ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯುವಂತೆ ಅವಕಾಶ ಕಲ್ಪಿಸಲು ಮನವಿ ಮಾಡಿದರು. ಈ ವೇಳೆ ಸಮಿತಿಯ ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ, ಖಜಾಂಚಿ ಶಂಭಣ್ಣ ಅಂಗಡಿ, ಮಾಜಿ ಅಧ್ಯಕ್ಷರಾದ ಚಂದ್ರಣ್ಣ ಆಲದಗೇರಿ, ಸದಸ್ಯರಾದ ಮಾಲಿಂಗಪ್ಪ ಶಿರೂರ ಶಿವಣ್ಣ ಶೆಟ್ಟರ ಹಾಗೂ ಇನ್ನಿತರರಿದ್ದರು.