ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಪುರಾತನ ಇತಿಹಾಸ ಹೊಂದಿರುವ ಹುಮನಾಬಾದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೇಸರಿ ಧ್ವಜ, ಹೂವುಗಳಿಂದ ಶೃಂಗಾರ ಗೊಂಡ ರಥ ಶನಿವಾರ ಬೆಳಗ್ಗೆ 6 ಗಂಟೆಗೆ ಸಲ್ಲುವ ಶುಭ ಮೂಹೂರ್ತದಲ್ಲಿ ಜಯಘೋಷಗಳ ನಡುವೆ ಅದ್ಧೂರಿಯಾಗಿ ಸಂಪನ್ನಗೊಂಡಿತು.ದೇವರ ಆಕರ್ಷಕ ಮುತ್ತಿನ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಥೇರ್ ಮೈದಾನದವರೆಗೆ ಜರುಗಿತು. ರಥೋತ್ಸವ ಆರಂಭಕ್ಕೂ ಮುನ್ನ ಹಿರೇಮಠ ಸಂಸ್ಥಾನದ ಶ್ರೀಗಳಾದ ರೇಣುಕ ವೀರ ಗಂಗಾಧರ ಶಿವಾಚಾರ್ಯರಿಂದ ವಿವಿಧ ಶರಣರ ಚಿತ್ರವುಳ್ಳ ಕಬ್ಬಿಣ ರಥದಲ್ಲಿ ಆಸಿನರಾದ ಕೂಡಲೇ ಥೇರ್ ಮೈದಾನದಿಂದ ಹಳೆ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿರುವ ನಂದಿ ಬಸವಣ್ಣನ ಕಟ್ಟೆಯವರೆಗೆ ರಥೋತ್ಸವ ಸಾಗಿತು. ಶನಿವಾರ ಬೆಳಗ್ಗೆ ಮೀನ ಲಗ್ನದಲ್ಲಿ ಜರುಗಿತು.
ಸಹಸ್ರಾರು ಭಕ್ತರು ರಥವನ್ನು ಏಳೆಯುವ ಮೂಲಕ ರಥದ ಮೇಲೆ ವಿವಿಧ ಹಣ್ಣು, ಬತಾಸು, ಖಾರೀಕು ಸೇರಿದಂತೆ ಇನ್ನಿತರ ಹರಕೆಯ ವಸ್ತುಗಳನ್ನು ತೂರಿ ತಮ್ಮ ಹರಕೆ ಪೂರೈಸುವ ಮೂಲಕ ಸಾಕ್ಷಿಯಾದರು.ಈ ಜಾತ್ರಾ ಮಹೋತ್ಸವ ಕಳೆದ 17 ದಿವಸಗಳಿಂದ ನಡೆಯುತ್ತಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ರಥೋತ್ಸವಕ್ಕೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆಯಂತೆ ದೇವರಿಗೆ ಶಾಲು ಹೊದಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಅದಲ್ಲದೇ ಪಟ್ಟಣದ ವಿವಿಧೆಡೆ ಜಾತ್ರೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಭಕ್ತರಿಗೆ ಪ್ರಸಾದ ರೂಪದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಿದರು.ಮೆರವಣಿಗೆಯಲ್ಲಿ ಪುರವಂತರ ಪುರವಂತಿಗೆ ಸೇವೆ. ಜಾನಪದ ವಾದ್ಯಮೇಳ, ನಂದಿಕೊಲು ಕುಣಿತ, ಬ್ರಾಸ್ ಬ್ಯಾಂಡಿನವರ ಗಾಯನ, ಡೋಲ್ ಜೋತೆಯಲ್ಲಿ ತಾಳ ಕುಣಿತ, ನಗಾರಿ, ಜಾನಪದ ಸಂಸ್ಕೃತಿಕ ಸಂಘದಿಂದ ಗಾರುಡಿ ಗೊಂಬೆಗಳು ಮೆರವಣಿಗೆಯಲ್ಲಿ ಸಾಗಿ ನೋಡುಗರ ಕಣ್ಮನ ಸೆಳೆಯುವಂತೆ ಆಕರ್ಷಕವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ್ ಮಾರ್ಗದರ್ಶನ, ಸಿಪಿಐ ಗುರುಲಿಂಗಪ್ಪಾಗೌಡ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ತಿಮಯ್ಯಾ, ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಂಜರ್ಗಿ, ಸಂಚಾರಿ ಪಿಎಸ್‌ಐ ಬಸವಲಿಂಗ, ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಪೋಲಿಸ್ ಸಿಬ್ಬಂದಿ ಬೀಗಿ ಬಂದೋಬಸ್ತ ಮಾಡಲಾಗಿತ್ತು.
ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೀರಣ್ಣಾ ಪಾಟೀಲ್, ಮಲ್ಲಿಕಾರ್ಜುನ ಮಾಳಶಟ್ಟಿ, ದತ್ತಕುಮಾರ ಚಿದ್ರಿ, ಸಿದ್ದಣ್ಣಾ ಚಕಪಳ್ಳಿ, ಪುರಸಭೆ ಸದಸ್ಯರು, ರಾಜ್ಯ ಅಂತರಾಜ್ಯದಿಂದ ದರ್ಶನಕ್ಕೆ ಬಂದಿರುವ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.