ಸಾರಾಂಶ
ಬಾಳೆಹೊನ್ನೂರುನರಸಿಂಹರಾಜಪುರ ತಾಲೂಕು ಮಾಗುಂಡಿಯ ಈಶ್ವರ ದೇವಾಲಯದ ಮುಂಭಾಗದಲ್ಲಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಾಂತರರ ಕಾಲದ ಎರಡು ಶಾಸನಗಳನ್ನು ಶೋಧಿಸುವ ಮೂಲಕ ಸಾಂತರರ ರಾಜ್ಯದ ತಗುನಾಡಿನ (ಬಾಳೆಹೊನ್ನೂರು) ಪ್ರಾಚೀನ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ನರಸಿಂಹರಾಜಪುರ ತಾಲೂಕು ಮಾಗುಂಡಿಯ ಈಶ್ವರ ದೇವಾಲಯದ ಮುಂಭಾಗದಲ್ಲಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಾಂತರರ ಕಾಲದ ಎರಡು ಶಾಸನಗಳನ್ನು ಶೋಧಿಸುವ ಮೂಲಕ ಸಾಂತರರ ರಾಜ್ಯದ ತಗುನಾಡಿನ (ಬಾಳೆಹೊನ್ನೂರು) ಪ್ರಾಚೀನ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ. ಭದ್ರಾ ನದಿ ಬಲದಂಡೆ ಮೇಲಿರುವ ಈಶ್ವರ ದೇವಾಲಯದ ಮುಂದಿನ ಆವರಣದಲ್ಲಿ ನಿಲ್ಲಿಸಿರುವ ಐದು ಸ್ಮಾರಕಗಳಲ್ಲಿ ಒಂದು ವೀರಗಲ್ಲು ಶಾಸನ ಮತ್ತು ದಾನ ಶಾಸನ ಪತ್ತೆಯಾಗಿವೆ.ದೇವಾಲಯದ ಬಲತುದಿ ನಿಂತಿರುವ ಕಣಶಿಲೆಯ ವೀರಗಲ್ಲು ಮೂರು ಫಲಕಗಳನ್ನು ಹೊಂದಿದೆ. ಕೆಳಗಿನ ಫಲಕದಲ್ಲಿ ವೀರನೊಬ್ಬ ಅಶ್ವರಥಾರೂಢನಾಗಿ ಯುದ್ಧ ಮಾಡುತ್ತಿರುವ ಹಾಗೂ ಅವನ ಮುಂದೆ ಮತ್ತೊಬ್ಬ ಖಡ್ಗಯೋಧನ ಚಿತ್ರಣ ಹಾಗೂ ಎಡಬದಿಯಲ್ಲಿ ಕೈ ಮುಗಿದು ನಿಂತಿರುವ ವ್ಯಕ್ತಿಯೊಬ್ಬನ ಚಿತ್ರಣಗಳಿವೆ. ಅದರ ಮೇಲಿನ ಫಲಕದಲ್ಲಿ ರಥಾರೂಢ ಯೋಧ ಬಹುಶಃ ಯುದ್ಧದಲ್ಲಿ ವೀರಮರಣ ಹೊಂದಿದ ನಿಮಿತ್ತ ಅವನನ್ನು ಇಬ್ಬರು ದೇವಕನ್ಯೆಯರು ಸ್ವರ್ಗಕ್ಕೆ ಕರೆದೊಯ್ಯತ್ತಿರುವ ಚಿತ್ರಣವಿದೆ.ಅದರ ಮೇಲಿನ ಅಗ್ರಫಲಕದಲ್ಲಿ ಸ್ವರ್ಗದಲ್ಲಿ ಪೀಠವೊಂದರ ಮೇಲೆ ರಾಜಠೀವಿಯಿಂದ ವಿರಾಜಮಾನನಾಗಿರುವ ವೀರ ಮತ್ತು ಇಕ್ಕೆಲಗಳಲ್ಲೂ ಚಾಮರಧಾರಿ ಸೇವಕಿಯರ ಚಿತ್ರಣವಿದೆ. ಈ ವೀರಗಲ್ಲಿನ ಕೆಳಫಲಕದ ಮೇಲ್ಭಾಗದಲ್ಲಿ 2 ಸಾಲು ಹಾಗೂ 2ನೇ ಫಲಕದ ಮೇಲ್ಭಾಗದಲ್ಲಿ ತ್ರುಟಿತ ಅಸ್ಪಷ್ಟ ಶಾಸನವಿದ್ದು ಗಂಗರ ಕಾಲದ ಹಳೆಗನ್ನಡ ಲಿಪಿ ಸಾದೃಶ್ಯ ಹೊಂದಿದ್ದು ಮಾಕಣ್ನನು ಎಂಬ ಉಲ್ಲೇಖ ಮಾತ್ರ ಸ್ಪಷ್ಟವಾಗಿ ಕಾಣುತ್ತಿದೆ.ದಾನ ಶಾಸನ ಕಣಶಿಲೆಯ ಮಧ್ಯಭಾಗದಲ್ಲಿದೆ. ಇದರ ಅಗ್ರಭಾಗದ ಫಲಕದ ಬಲಗಡೆ ಕರುವಿಗೆ ಹಾಲೂಡುತ್ತಿರುವ ಹಸುವಿನ ಚಿತ್ರಣವಿದೆ, ಎಡಗಡೆ ಈಶ್ವರ ಲಿಂಗದ ಚಿತ್ರಣವಿದೆ. ಮೇಲೆ ಸೂರ್ಯ-ಚಂದ್ರರ ಚಿತ್ರಣವಿದೆ. ಫಲಕದ ಕೆಳಭಾಗದಲ್ಲಿ ಹೊಯ್ಸಳರ ಲಿಪಿ ಹೋಲುವ ೧೨-೧೩ನೇ ಶತಮಾನದ ಕನ್ನಡ ಲಿಪಿ ಏಳು ಸಾಲಿನ ತ್ರುಟಿತ ಶಾಸನವಿದೆ.ದೊರೆತಿರುವ ಶಾಸನಗಳಲ್ಲಿ ಸ್ವಸ್ತಿ ಶ್ರೀ ಮತು, (ನ)ಸಂವತ್ಸರ, ದ ಪಾಲ್ಗುಣ, ವಲ, (ಮಾ)ಗುಣ್ಡಿಯ ಎಂಬುದಾಗಿ ಶಾಸನ ಪಾಠ ಸದ್ಯಕ್ಕೆ ದೊರೆತಿದ್ದು ಇದರ ಸೂಕ್ಷ್ಮ ಅಧ್ಯಯನ ನಡೆದಿದೆ. ಹೀಗೆ ಈ ಎರಡು ಶಾಸನಗಳ ಲಭ್ಯತೆಯಿಂದ ಸಾಂತರ ದೊರೆಗಳ ತಗುನಾಡು ವ್ಯಾಪ್ತಿ ಮಾಗುಂಡಿವರೆಗೂ ಇತ್ತು ಮತ್ತು ಅವರ ಕಾಲದಲ್ಲೇ ಇಲ್ಲಿ ಪ್ರಾಚೀನ ಈಶ್ವರ ದೇವಾಲಯವಿತ್ತು ಎಂಬ ಮಹತ್ವದ ಸಂಗತಿ ಈ ದಾನ ಶಾಸನದ ಮೂಲಕ ತಿಳಿದು ಬರುತ್ತದೆ.ಶಾಸನದ ಕ್ಷೇತ್ರ ಕಾರ್ಯದಲ್ಲಿ ಕೂಡಲಿ ಅನಿಲಕುಮಾರ್, ದೇವಾಲಯದ ಅರ್ಚಕ ಬಿ.ಜಿ.ಸತೀಶ್ ಹೊಳ್ಳ ಶಾಸನ ಅಧ್ಯಯನದಲ್ಲಿ ಮೈಸೂರಿನ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್, ಬೆಂಗಳೂರಿನ ವೀರಗಲ್ಲು ತಜ್ಞ ಡಾ.ಆರ್ ಶೇಷಶಾಸ್ತ್ರಿ ಸಹಕಾರ ನೀಡಿದ್ದರು.೦೭ಬಿಹೆಚ್‌ಆರ್ ೧:ಬಾಳೆಹೊನ್ನೂರು ಸಮೀಪದ ಮಾಗುಂಡಿಯಲ್ಲಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧಿಸಿರುವ ಸಾಂತರರ ಕಾಲದ ಶಾಸನಗಳು.