ವೀರಪ್ಪ ಮೊಯ್ಲಿಗೆ ಚುನಾವಣೆಗೆ ನಿಲ್ಲುವ ಯೋಗ್ಯತೆಯಿಲ್ಲ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುನಿರಾಜು

| Published : Feb 08 2024, 01:32 AM IST

ವೀರಪ್ಪ ಮೊಯ್ಲಿಗೆ ಚುನಾವಣೆಗೆ ನಿಲ್ಲುವ ಯೋಗ್ಯತೆಯಿಲ್ಲ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಎತ್ತಿನಹೊಳೆ ಯೋಜನೆ ತರುವುದಾಗಿ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡಿದ್ದಾರೆ. ಇವರು ಈ ಹಿಂದೆ ಕರ್ನಾಟಕದಿಂದ ನೀರು ತರುವುದಾಗಿ ಬೊಗಳೆ ಬಿಟ್ಟಿದ್ದರು, ಆದರೆ ಈಗ ಆಂಧ್ರಪ್ರದೇಶದಿಂದ ನೀರು ತರುವುದಾಗಿ ಹೊರಟಿದ್ದಾರೆ. ಇವರು ಈ ಕ್ಷೇತ್ರದಲ್ಲಿ ನಿಂತರೂ ಹೀನಾಯವಾಗಿ ಸೋಲುವುದು ಖಚಿತ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ ಎರಡು ಬಾರಿ ಸಂಸದರಾಗಿದ್ದ ಅವಧಿ ಈ ಭಾಗದ ಅಭಿವೃದ್ಧಿಯಡೆ ಗಮನಹರಿಸದೇ ಕೇವಲ ಸುಳ್ಳು ಭರವಸೆ, ಬೊಗಳೆ ಬಿಟ್ಟಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ನಿಲ್ಲುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಟೀಕಾ ಪ್ರಹಾರ ನಡೆಸಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರ ಹಾಗೂ ಗೋಡೆ ಬರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊಯ್ಲಿಯವರು ಎರಡು ಸಲ ಸಂಸದರಾಗಿ, ಕೇಂದ್ರ ಸಚಿವರಾಗಿ , ಮುಖ್ಯಮಂತ್ರಿಯಾಗಿ ಜವಾಬ್ದಾರಿ ಸ್ಥಾನದಲ್ಲಿದ್ದವರು.

ತಮ್ಮ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಎತ್ತಿನಹೊಳೆ ಯೋಜನೆ ತರುವುದಾಗಿ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡಿದ್ದಾರೆ. ಇವರು ಈ ಹಿಂದೆ ಕರ್ನಾಟಕದಿಂದ ನೀರು ತರುವುದಾಗಿ ಬೊಗಳೆ ಬಿಟ್ಟಿದ್ದರು, ಆದರೆ ಈಗ ಆಂಧ್ರಪ್ರದೇಶದಿಂದ ನೀರು ತರುವುದಾಗಿ ಹೊರಟಿದ್ದಾರೆ. ಇವರು ಈ ಕ್ಷೇತ್ರದಲ್ಲಿ ನಿಂತರೂ ಹೀನಾಯವಾಗಿ ಸೋಲುವುದು ಖಚಿತ. ಅವರು ಗೆದ್ದರೂ ಸಹ ಈ ಭಾಗಕ್ಕೆ ನೀರು ತರುವುದು ಅವರ ಕೈಯಲ್ಲಿ ಸಾಧ್ಯವಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಬಿಟ್ಟಿ ಭಾಗ್ಯಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಎಲ್ಲಾ ಭಾಗ್ಯಗಳೂ ಭೋಗಸ್ ಭಾಗ್ಯಗಳಾಗಿವೆ. ಈ ಹಿಂದೆ ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ನಿಲ್ಲಿಸಿರುವುದೇ ಇವರ ಸಾಧನೆಯಾಗಿದೆ. ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಮಂತ್ರಿಗಳು, ಅಧಿಕಾರಿಗಳು ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು.

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರ ನಾಯಕತ್ವದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಪಕ್ಷ ಬಲಾಢ್ಯ ಪಕ್ಷವಾಗಿತ್ತು. ಆದರೆ, ಶ್ರೀರಾಮರೆಡ್ಡಿ ಮರಣದ ನಂತರ ಕ್ಷೇತ್ರದಲ್ಲಿ ಸಿಪಿಐ(ಎಂ) ಪಕ್ಷ ಸಂಪೂರ್ಣವಾಗಿ ಮುಳುಗಿಹೋಗಿದೆ. ಈ ಪಕ್ಷದ ಬಹುತೇಕ ಮುಖಂಡರು ಸದ್ಯಕ್ಕೆ ತಟಸ್ಥರಾಗಿದ್ದಾರೆ, ನಾವು ಅವರ ಸಂಪರ್ಕ ಸಾಧಿಸಬೇಕೆಂದು ಹೇಳಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಅವರ ಹಾಗೆ ಕ್ಷೇತ್ರದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡುವ ಅವಶ್ಯಕತೆ ನಮಗಿಲ್ಲ ಎಂದು ಪರೋಕ್ಷವಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಕ್ಷೇತ್ರದ ಭ್ರಷ್ಟ ಶಾಸಕರ ದುರಾಡಳಿತದ ವಿರುದ್ಧ ಸಿಪಿಐ(ಎಂ) ಪಕ್ಷದ ಮಾದರಿಯಲ್ಲಿ ಬಿಜೆಪಿಯಿಂದ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲು ಇದೇ ತಿಂಗಳ 9 ರಿಂದ 11 ರವರೆಗೆ 3 ದಿನಗಳ ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರ ಹಾಗೂ ಗೋಡೆಬರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳ ಗೆಲ್ಲಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಕ್ಷೇತ್ರದ ಮನೆ ಮನೆಗೂ ತಲುಪಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಸಭಾ ಕ್ಷೇತ್ರದ ಉಸ್ತುವಾರಿ ನಾಗಭೂಷಣ್, ಸಹ ಉಸ್ತವಾರಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಸುರೇಶ್, ಸಂಚಾಲಕ ಕೃಷ್ಣಾರೆಡ್ಡಿ, ಸಹಸಂಚಾಲಕ ಲೋಕೇಶ್, ಮಂಡಲಾಧ್ಯಕ್ಷ ಆರ್. ಪ್ರತಾಪ್,ಗುಡಿಬಂಡೆ ಮಂಡಲಾಧ್ಯಕ್ಷ ಗಂಗಿರೆಡ್ಡಿ ಸೇರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.