ಬಸವಣ್ಣ, ಬುದ್ಧ, ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸಮಾನತೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರುಸಾಮಾಜಿಕ ಅನಿಷ್ಟ, ಮೌಢ್ಯತೆ ದೂರ ಮಾಡಿ ಸಾಮಾಜಿಕ ನ್ಯಾಯ, ಸಮಾನತೆಯ ಬೆಳಕು ಹರಿಸಿದ ಬಸವಣ್ಣನವರ ವಚನ ಸಾಹಿತ್ಯವನ್ನು ಯುವ ಜನತೆಗೆ ತಿಳಿಸಬೇಕು. ಜಾತೀಯತೆ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಮಾಡುವವರಿಂದಲೇ ಜಾತೀಯತೆ ಹೆಚ್ಚಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ವಿಜಯನಗರ ಮೂರನೇ ಹಂತದ ವಿ.ಕೆ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ವಿಜಯನಗರ 3 ಮತ್ತು 4ನೇ ಹಂತ, ಹಿನಕಲ್ ವಿಜಯಶ್ರೀಪುರದ ವೀರಶೈವ ಲಿಂಗಾಯತ ಬಸವ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಬಸವಣ್ಣ, ಬುದ್ಧ, ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸಮಾನತೆ ನೀಡಿದ್ದಾರೆ. ಬಸವಣ್ಣ ಅವರು ದಯವೇ ಧರ್ಮದ ಮೂಲವಯ್ಯ ಎಂದಿದ್ದರು. ಬಡವರ ಬಗ್ಗೆ, ಅಬಲರ ಬಗ್ಗೆ ಪ್ರೀತಿ, ಕರುಣೆ, ಮಾನವೀಯ ಮೌಲ್ಯದಿಂದ ನೋಡುವುದನ್ನು ಹೇಳಿಕೊಟ್ಟರು. ಆದರೆ, ಇಂದಿಗೂ ಸಮಾಜದಲ್ಲಿ ಜಾತೀಯತೆ ನಿರ್ಮೂಲನೆಯಾಗಿಲ್ಲ ಎಂದು ಅವರು ವಿಷಾದಿಸಿದರು.12ನೇ ಶತಮಾನದಲ್ಲಿ ಬಸವಣ್ಣ ನಡೆಸಿದ ಕ್ರಾಂತಿ ಇಂದಿಗೂ ಮರೆಯಲಾಗದ ಕ್ಷಣವಾಗಿದೆ. ಉತ್ತರ ಕಲ್ಯಾಣ ಪ್ರವಾಸಕ್ಕೆ ಹೋದಾಗಲೆಲ್ಲಾ ಬಸವ ಕಲ್ಯಾಣ, ಕೂಡಲಸಂಗಮಕ್ಕೆ ಹೋಗಿಯೇ ಬರುತ್ತೇನೆ. ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನ ಸಾಹಿತ್ಯವನ್ನು ಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ವಚನ ಸಾಹಿತ್ಯವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಾ ಹೋದರೆ ದಾರ್ಶನಿಕರ ಕೊಡುಗೆ ಗೊತ್ತಾಗುತ್ತದೆ ಎಂದರು.ಬಸವಣ್ಣನವರ ಉತ್ಸವವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಬಸವ ಕಲ್ಯಾಣದಿಂದ ಆರಂಭವಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಬಸವಣ್ಣನವರ ಜಯಂತಿ ಆಚರಿಸಿ ಸುಮ್ಮನಾಗುವ ಜತೆಗೆ, ಇಂದಿನ ಯುವಜನತೆಗೆ ವಚನಸಾಹಿತ್ಯದಲ್ಲಿರುವ ಸಾರವನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು. ಆರು ತಿಂಗಳಲ್ಲಿ ನೀರುಮುಂದಿನ ಆರುತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳಿಗೆ ದಿನದ 24 ಗಂಟೆಗಳ ಕಾಲ ನೀರು ಹರಿಯಲಿದೆ. ವಿಜಯನಗರ 3ನೇ ಹಂತವನ್ನು ನಗರ ಪಾಲಿಕೆಗೆ ಸೇರಿಸಲು ಪ್ರಯತ್ನ ಮಾಡಿದೆ. ವಿಜಯನಗರ 4ನೇs ಹಂತ, ಹಿನಕಲ್ ನಲ್ಲಿ ಅನೇಕ ಕೆಲಸ ಮಾಡಿಸಿದ್ದೇನೆ. ಯುಜಿಡಿ ವ್ಯವಸ್ಥೆ, ಚರಂಡಿ ಮಾಡಿಸುವ ಜತೆಗೆ ಸುಂದರ ರಸ್ತೆಗಳನ್ನು ಮಾಡಿಸಿದ್ದೇನೆ ಎಂದರು.ಬಳಗವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ವಿಜಯನಗರ 3ನೇ ಹಂತದ ವೀರಶೈವ ಲಿಂಗಾಯತ ಬಸವ ಬಳಗ ಅಧ್ಯಕ್ಷ ಡಿ.ಎಂ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿದರು.ಶ್ರೀಬಸವೇಶ್ವರ ಪಟ್ಟದ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ, ಮೈಮುಲ್ ಮಾಜಿ ನಿರ್ದೇಶಕ ಎಸ್.ಸಿ. ಅಶೋಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ. ಬಸವರಾಜು, ಮೈಸೂರು ನಗರ ಅಧ್ಯಕ್ಷ ಎಂ.ಎಚ್. ಚಂದ್ರಶೇಖರ್, ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಸಿ. ಬಸವರಾಜು, ನಿರ್ದೇಶಕರಾದ ಡಾ. ಶೈಲಾ ನಾಗರಾಜ್, ಬಸವಜಯಂತಿ ಉತ್ಸವದ ಅಧ್ಯಕ್ಷ ಬಿ.ಕೆ. ನಾಗರಾಜು, ಕೆ.ಎಸ್. ಮಹಾಲಕ್ಷ್ಮೀ, ಕೆ.ಎಸ್. ಮಂಜುನಾಥ, ಎನ್. ಮಂಜುನಾಥ್, ಎಚ್.ಎಸ್. ಪ್ರಕಾಶ್, ಎಸ್. ಶಿವಕುಮಾರ್, ಗಂಗಾಧರ್ ವಿ. ಹಟ್ಟಿಹೊಳಿ, ಬಿ. ಕಾರ್ತಿಕ್, ಮಲ್ಲಿಕಾರ್ಜುನಸ್ವಾಮಿ, ಜಿ. ರತ್ನ, ಡಾ.ಎಚ್.ಎಸ್. ಸನತ್ ಕುಮಾರ್, ಎಸ್. ವೀರಣ್ಣ ಮೊದಲಾದವರು ಇದ್ದರು.----------------eom/mys/dnm/