ಸಾರಾಂಶ
ಭದ್ರಾವತಿ ತಾಲೂಕು ಕಚೇರಿ ರಸ್ತೆಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಚುನಾವಣೆ ಭಾನುವಾರ ಯಶಸ್ವಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ತಾಲೂಕು ಕಚೇರಿ ರಸ್ತೆಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಚುನಾವಣೆ ಭಾನುವಾರ ಯಶಸ್ವಿಯಾಗಿ ನಡೆಯಿತು.ಅಧ್ಯಕ್ಷ ಸ್ಥಾನ ಹಾಗೂ ೨೦ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಕೆ.ಎಸ್.ವಿಜಯಕುಮಾರ್ ನೇತೃತ್ವದ ತಂಡದಿಂದ ೨೦ ಮಂದಿ ಹಾಗೂ ವಾಗೀಶ್ ನೇತೃತ್ವದ ತಂಡದಿಂದ ೧೮ ಮಂದಿ ಮತ್ತು ಇಬ್ಬರು ಸ್ವತಂತ್ರವಾಗಿ ಒಟ್ಟು ೨೬ ಪುರುಷರು, ೧೪ ಮಹಿಳೆಯರು ಸೇರಿದಂತೆ ಒಟ್ಟು ೪೦ ಮಂದಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಯಿತು. ಮತಗಟ್ಟೆ ಬಳಿ ಬೆಳಿಗ್ಗೆಯಿಂದ ಸಂಜೆವರೆಗೂ ಜನಸಂದಣಿ ಕಂಡು ಬಂದಿತು. ತಾಲೂಕಿನ ವಿವಿಧೆಡೆಗಳಿಂದ ಮತದಾನ ಮಾಡಲು ಮತದಾರರು ಆಗಮಿಸಿದ್ದರು. ಒಟ್ಟು ೧೫೫೨ ಮತದಾರರಿದ್ದು, ಈ ಪೈಕಿ ಶೇ.೭೮ರಷ್ಟು ೧೧೯೫ ಮಂದಿ ಮತ ಚಲಾಯಿಸಿದರು.ಬಿಳಿಕಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಯೋಗೇಶ್, ತರಳಬಾಳು ಯುವ ವೇದಿಕೆ ಮಾಜಿ ಅಧ್ಯಕ್ಷ ಸಂಜೀವ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರಾದ ಸಿದ್ದಲಿಂಗಯ್ಯ ಸೇರಿದಂತೆ ಪ್ರಮುಖರು ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಶಿವಮೂರ್ತಿ ಕಾರ್ಯ ನಿರ್ವಹಿಸಿದರು.