19ರಂದು ವೀರಶೈವ -ಲಿಂಗಾಯತ ಏಕತಾ ಸಮಾವೇಶ

| Published : Sep 07 2025, 01:00 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ಶುಕ್ರವಾರ ರಾಜ್ಯ ಮತ್ತು ನೆರೆ ರಾಜ್ಯದ ವಿವಿಧ ಮಠಾಧೀಶರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಜಾತಿ ಗಣತಿ ಹಿನ್ನೆಲೆಯಲ್ಲಿ ಜನರಲ್ಲಿನ ಗೊಂದಲ ನಿವಾರಣೆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಸಮಾಜದ ಎಲ್ಲರೂ ಗಣತಿ ವೇಳೆ ವೀರಶೈವ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಕರೆಕೊಟ್ಟರು.

ಹುಬ್ಬಳ್ಳಿ: ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಕೆಲವರು ಸಮಾಜ ಇಬ್ಭಾಗ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ವೀರಶೈವ -ಲಿಂಗಾಯತ ಒಂದೇ ಎಂದು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಸೆ. ೧೯ರಂದು ನಗರದ ನೆಹರು ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ಶುಕ್ರವಾರ ರಾಜ್ಯ ಮತ್ತು ನೆರೆ ರಾಜ್ಯದ ವಿವಿಧ ಮಠಾಧೀಶರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಜಾತಿ ಗಣತಿ ಹಿನ್ನೆಲೆಯಲ್ಲಿ ಜನರಲ್ಲಿನ ಗೊಂದಲ ನಿವಾರಣೆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಸಮಾಜದ ಎಲ್ಲರೂ ಗಣತಿ ವೇಳೆ ವೀರಶೈವ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಕರೆಕೊಟ್ಟರು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಹಿಂದಿನಿಂದರೂ ವೀರಶೈವ ಲಿಂಗಾಯತ ಒಂದೇ ಎಂದು ನಿಲುವು ತಾಳಿದೆ. ಅದೇ ನಿಲುವಿಗೆ ಈಗಲೂ ಬದ್ಧವಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗ ನಾವು ಖಂಡಿಸಿದ್ದೇವೆ. ಬಸವ ಸಂಸ್ಕೃತಿ ಹೆಸರಿನಲ್ಲಿ ಯಾತ್ರೆ ಮಾಡಿ ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದು ಖಂಡನೀಯ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮ: ವೀರಶೈವ ಲಿಂಗಾಯತ ಎನ್ನುವುದು ತತ್ವ ಪ್ರಧಾನ ಧರ್ಮ. ವ್ಯಕ್ತಿ ಪ್ರದಾನವಲ್ಲ. ಕೆಲವರು ಬಸವ ಸಂಸ್ಕೃತಿ ಯಾತ್ರೆಯಲ್ಲಿ ವೈದಿಕ ಪರಂಪರೆ ವಿರೋಧಿಸುತ್ತಿದ್ದಾರೆ. ಆದರೆ, ವಿರೋಧಿಸುವವರೇ ಬೃಹತ್ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರ ನಡೆ-ನುಡಿ ಭಿನ್ನವಾಗಿದೆ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಯಾವುದೇ ಕಾಲಕ್ಕೂ ಆಗಬಾರದು ಎಂದರು.

ಬಸವ ಸಂಸ್ಕೃತಿ‌ ಯಾತ್ರೆ ತಂಡ ದುರುದ್ದೇಶ ಇಟ್ಟುಕೊಂಡು‌ ಹೊರಟಿದೆ. ಹಿಂದೆ ಪ್ರತ್ಯೇಕ ಲಿಂಗಾಯತ ಎಂದರು, ಇದೀಗ ಬಸವಧರ್ಮ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರಲ್ಲಿ ಬದ್ಧತೆ ಕೊರತೆ ಇದೆ. ಅವರಲ್ಲಿ ಸಾಕಷ್ಟು ಗೊಂದಲಗಳೂ ಇವೆ. ಸಮಾಜವನ್ನು ವಿಘಟನೆ ಮಾಡುವುದು ಅವರ ಗುರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೀಠ ತ್ಯಾಗ ಮಾಡಲಿ: ಕೆಲ ಬುದ್ಧಿಜೀವಿಗಳು ಬಸವ ಧರ್ಮದಲ್ಲಿ ಮಠ ಸಂಸ್ಕೃತಿ ಇಲ್ಲ ಎನ್ನುತ್ತಾರೆ. ಆದರೆ, ಅವರ ಜತೆ ಇರುವ ಸ್ವಾಮೀಜಿಗಳು ಮಠ ಸಂಸ್ಕೃತಿಯಿಂದ ಬಂದವರು ಎನ್ನುವುದನ್ನು ಮರೆತಿದ್ದಾರೆ. ಅವರಲ್ಲೇ ದಂದ್ವ ನಿಲುವು ಇದೆ. ಮಠದ ಸಂಸ್ಕೃತಿ ಇಲ್ಲ ಎನ್ನುವ ಪೀಠಾಧಿಪತಿಗಳು ತಮ್ಮ ಪೀಠ ತ್ಯಾಗ ಮಾಡಿ, ಬಸವಧರ್ಮ ಹೋರಾಟದಲ್ಲಿ ಭಾಗವಹಿಸಲಿ ಎಂದು ದಿಂಗಾಲೇಶ್ವರ ಶ್ರೀ ಸವಾಲು ಹಾಕಿದರು.

ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸೆ. 19ರಂದು ನಡೆಯಲಿದ್ದು, ಹಾಲಿ ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾವೇಶ ಶಕ್ತಿ ಪ್ರದರ್ಶನವಲ್ಲ.‌ ಸಮಾಜದ ಉಳಿವಿನ ಪ್ರದರ್ಶನ. ಶಕ್ತಿ ಪ್ರದರ್ಶನ ಅವರು ಮಾಡುತ್ತಿದ್ದಾರೆ, ಮಾಡಲಿ ಎಂದರು.

ಕಾಂಗ್ರೆಸ್‌ ಸರ್ಕಾರ?: ಪ್ರತ್ಯೇಕ ಧರ್ಮ ಹೋರಾಟದ ಹಿಂದೆ ರಾಜಕೀಯ ಷಡ್ಯಂತ್ರದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಹಿಂದೆ ಹೋರಾಟ, ಈಗ ಹೋರಾಟ ಮಾಡುವಾಗ ಯಾವ ಸರ್ಕಾರ ಅಧಿಕಾರದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಸರ್ಕಾರತ್ತ ಬೊಟ್ಟು ಮಾಡಿದರು.

ಖಾವಿ ತೊಟ್ಟ ಮಠಾಧೀಶರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಯಾರು ವೀರಶೈವ -ಲಿಂಗಾಯತ ತತ್ವ ಪ್ರಧಾನ ಎಂದು ಒಪ್ಪಿಕೊಳುತ್ತಾರೋ ಅವರೆಲ್ಲ ಸಮಾವೇಶಕ್ಕೆ ಬರುತ್ತಾರೆ. ರಾಜ್ಯದ ಎಲ್ಲ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಎಷ್ಟೇ ದೊಡ್ಡ ಮಠಾಧೀಶರಿದ್ದರೂ ಸಮಾವೇಶಕ್ಕೆ ಪ್ರತ್ಯೇಕ ಆಹ್ವಾನವಿಲ್ಲ. ಪತ್ರಿಕಾಗೋಷ್ಠಿಯೇ ಆಹ್ವಾನ ಎಂದು ತಿಳಿದು ಮತ್ತು ವೀರಶೈವ ಲಿಂಗಾಯತ ಒಂದೇ ಎಂದು ಪ್ರತಿಪಾದಿಸುವವರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ ಬೊಮ್ಮಲಿಂಗೇಶ್ವರ ಮಠದ ಶ್ರೀಕಂಠಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ. ಇದರಿಂದ ಗೊಂದಲವಾಗುತ್ತಿದೆ. ಭಕ್ತರು ಇದಕ್ಕೆ ಬಲಿಯಾಗಬಾರದು. ನಾವೆಲ್ಲ ಒಂದೇ ಎಂಬ ತತ್ವವನ್ನು ಸಮಾಜದಲ್ಲಿ ಮೂಡಿಸಬೇಕು. ಮಹಾರಾಷ್ಟ್ರ ಜನರೂ ವೀರಶೈವ -ಲಿಂಗಾಯತ ಒಂದೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಆಂಧ್ರಪ್ರದೇಶದ ಸೋಮಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ಸ್ವತಂತ್ರ ಧರ್ಮ. ವೀರಶೈವ, ಲಿಂಗಾಯತ ಬೇರೆ ಬೇರೆ ಅಲ್ಲ. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಿ ಗೊಂದಲ ನಿವಾರಿಸಲಾಗುವುದು ಎಂದರು.

ಸಿಂದಗಿ ಸಾರಂಗ ಮಠದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ವೀರಶೈವ -ಲಿಂಗಾಯತ ಒಂದೇ ಎಂಬುದು ನಮ್ಮೆಲ್ಲರ ತತ್ವವಾಗಿದೆ. ಜನರಲ್ಲಿ ಗೊಂದಲ ಆಗಬಾರದು ಎಂದು ಶ್ರೀಗಳು ಈ ನಿರ್ಣಯ ಕೈಗೊಂಡಿದ್ದೇವೆ. ಈ ಮೂಲಕ ಸಮಾಜದ ಗೊಂದಲ‌ ದೂರ ಮಾಡುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮತ್ತು ನೆರೆ ರಾಜ್ಯದ ವಿವಿಧ ಮಠಾಧೀಶರು ಭಾಗವಹಿಸಿದ್ದರು.