ಸಂಕಷ್ಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯ

| Published : Mar 02 2025, 01:19 AM IST

ಸಾರಾಂಶ

ವೀರಶೈವ ಲಿಂಗಾಯಿತ ಬೃಹತ ಸಮಾವೇಶ, ಸೇವಾ ದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಈಶ್ವರ್‌ ಖಂಡ್ರೆ ಹೇಳಿಕೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ವೀರಶೈವ ಲಿಂಗಾಯಿತ ಸಮುದಾಯ ರಾಜ್ಯದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದು ಪ್ರಸ್ತುತ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದೆ. ಎಲ್ಲಾ ಒಳ ಪಂಗಡಗಳು ಒಗ್ಗೂಡುವ ಮೂಲಕ ಸಂಘಟಿತರಾಗಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದಿಂದ ಶನಿವಾರ ಆಯೋಜಿಸಲಾಗಿದ್ದ ವೀರಶೈವ ಲಿಂಗಾಯಿತ ಬೃಹತ ಸಮಾವೇಶ ಹಾಗೂ ಸೇವಾ ದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಲಿಂಗಾಯಿತ ಸಮುದಾಯ ಭವ್ಯ ಇತಿಹಾಸ ಹೊಂದಿದೆ. ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿರುವ ಸಮುದಾಯ ಕವಲು ದಾರಿಯಲ್ಲಿ ಸಾಗುತ್ತಿದ್ದು, ಹಲವು ಸವಾಲುಗಳ ನಡುವೆ ಬದುಕುವಂತ ಸ್ಥಿತಿ ಎದುರಾಗಿದೆ. ಸಮುದಾಯ ಒಟ್ಟಾಗಬೇಕು. ವೈಯಕ್ತಿಕ ಹಿತಾಸಕ್ತಿ ಮರೆತು ಜಗತ್ತಿಗೆ ಸಂಸ್ಕಾರ ನೀಡಿರುವ ವೀರಶೈವ ಲಿಂಗಾಯಿತ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಒಳ ಪಂಗಡಗಳಿಂದಾಗಿ ಸಮುದಾಯ ಕವಲು ದಾರಿಯಲ್ಲಿ ಸಾಗುತ್ತಿರುವ ಪರಿಣಾಮವಾಗಿ ಸಮುದಾಯದ ಜನಸಂಖ್ಯೆ ಕ್ಷೀಣಿಸುವಂತಾಗಿದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ವೀರಶೈವ ಲಿಂಗಾಯತ ಸಮುದಾಯ ಒಗ್ಗಾಟ್ಟಾಗಬೇಕು. ಯುವಕರು ವಿದ್ಯಾವಂತರಾಗಿ ಸರ್ಕಾರಿ ನೌಕರಿಯನ್ನೇ ಕಾಯದೆ ಕೌಶಲ್ಯಾದಾರಿತ ತರಬೇತಿ ಪಡೆದು ಸ್ವಯಂ ಉದ್ಯೋಗದತ್ತ ಮುಖ ಮಾಡಬೇಕು ಎಂದು ಹೇಳಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಮಾವೀಯತೆಯನ್ನು ವಿಶ್ವಕ್ಕೆ ಸಾರಿದ್ದ ವಿಶ್ವ ಗುರು ಬಸವಣ್ಣನ ಬಸವ ಧರ್ಮ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ನೀಡಿದೆ. ಬ್ರಿಟಿಷರು, ಪೇಶ್ವೆಗಳು, ಮುಸಲ್ಮಾನರು ದೇಶವನ್ನು ಆಳಿ ಹೋದರೂ ಬಸವ ಧರ್ಮಕ್ಕೆ ಚ್ಯುತಿಬಾರದೆ ಇಂದಿಗೂ ಹೆಮ್ಮರವಾಗಿದೆ. ಬಸವಣ್ಣನ ವಾರಸುದಾರರಾಗಿರುವ ವೀರಶೈವ ಲಿಂಗಾಯಿತರು ಸಂಘಟಿತರಾಗಬೇಕು. ಆ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಮೊಳಕಾಲ್ಮುರು ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ತಾಲೂಕಿನ ವೀರಶೈವ ಲಿಂಗಾಯಿತರು ಒಂದು ಕಾಲಘಟ್ಟದಲ್ಲಿ ಜನತೆಗೆ ದಾಸೋಹ ನೀಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಅವರು ಆರ್ಥಿಕ ಸಂಕಷ್ಟದಲ್ಲಿ ಬದುಕುವಂತಾಗಿದೆ. ಸಮುದಾಯದ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡಬೇಕು. ಸಮುದಾಯಕ್ಕೆ ತಾಲೂಕು ಕೇಂದ್ರ ಸ್ಥಾನದಲ್ಲಿ ಮೂರು ಎಕರೆ ಜಮೀನು ಕೊಡಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಆಂದ್ರ ಪ್ರದೇಶದ ವೀರಶೈವ ಲಿಂಗಾಯಿತ ಮಹಾ ಸಭಾ ರಾಜ್ಯಧ್ಯಕ್ಷ ಕಾಪು ರಾಮಚಂದ್ರರೆಡ್ಡಿ, ಮಹಾ ಸಬಾ ತಾಲುಕು ಅಧ್ಯಕ್ಷ ಎಂ.ಡಿ.ಮಂಜುನಾಥ, ಭ್ರಹ್ಮಗಿರಿ ಬೆಟ್ಟದ ಸೋಮಶೇಖರ ಸ್ವಾಮೀಜಿ, ಸಮಾಜದ ಗುರುಗಳಾದ ಚನ್ನವೀರ ಸ್ವಾಮಿ, ರೇಣುಕಾಸ್ವಾಮಿ, ಡಾ.ವೀರಭದ್ರಯ್ಯ ಸ್ವಾಮಿ, ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮನೋಹರ್ ಅಜ್ಜಿಗೆರೆ, ಮಹಿಳಾ ಘಟಕದ ರಾಜ್ಯಧ್ಯಕ್ಷೆ ಮುಕ್ತಾಂಬ, ಆರತಿ ಮಹಡಿ ಶಿವಮೂರ್ತಿ, ಎಚ್.ಟಿ.ನಾಗರೆಡ್ಡಿ, ಚಂದ್ರಶೇಖರ ಗೌಡ, ವಿನಯ ಕುಮಾರ್, ನುಂಕೇಶ ಗೌಡ, ಟಿ.ರೇವಣ್ಣ, ಎಂ.ಎನ್.ವಿಜಯ ಲಕ್ಷ್ಮಿ ಇದ್ದರು.