ವೀರಶೈವ ಒಳಪಂಗಡ ಬೇಧ ಮರೆತು ಒಂದಾಗಿ

| Published : Jul 15 2024, 01:55 AM IST

ಸಾರಾಂಶ

ಒಳ ಪಂಗಡಗಳನ್ನೆಲ್ಲಾ ಮರೆತು, ವೀರಶೈವ ಒಂದೇ ಎಂಬ ಮನೋಭಾವ ಮೂಡಿಸುವುದೇ ವೀರಶೈವ ಸಮಾಜದ ಆಶಯವಾಗಿದೆ. ಒಳಪಂಗಡಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸುವ ಕಡೆಗೂ ಸಮಾಜ ಬಾಂಧವರು ಮುಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಪಂಚಮಸಾಲಿ ಸಮಾಜ ಅಪಾರ ಶ್ರಮ: ಡಾ.ಶಾಮನೂರು ಶಿವಶಂಕರಪ್ಪ ಶ್ಲಾಘನೆ - ಡಾ.ಮಹಾಂತ ಸ್ವಾಮಿ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಕಾಲೇಜು ಉದ್ಘಾಟನೆ । ಗಣ್ಯರಿಗೆ ಸನ್ಮಾನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಒಳ ಪಂಗಡಗಳನ್ನೆಲ್ಲಾ ಮರೆತು, ವೀರಶೈವ ಒಂದೇ ಎಂಬ ಮನೋಭಾವ ಮೂಡಿಸುವುದೇ ವೀರಶೈವ ಸಮಾಜದ ಆಶಯವಾಗಿದೆ. ಒಳಪಂಗಡಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸುವ ಕಡೆಗೂ ಸಮಾಜ ಬಾಂಧವರು ಮುಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಎಸ್‌.ಎಸ್‌. ಲೇಔಟ್‌ ಬಿ ಬ್ಲಾಕ್‌ನಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಷನಲ್ ಟ್ರಸ್ಟ್‌ನಿಂದ ಸ್ಥಾಪಿಸಿದ ಡಾ.ಮಹಾಂತ ಸ್ವಾಮಿ ಪದವಿಪೂರ್ವ ಕಾಲೇಜು ಕಟ್ಟಡ, ಪಂಚಮಸಾಲಿ ಸಮಾಜದ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಳಪಂಗಡಗಳನ್ನೆಲ್ಲಾ ಮರೆತು, ಒಂದಾಗುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.

ಫಲಿತಾಂಶದಲ್ಲಿ ಪ್ರಗತಿ ಇಲ್ಲ:

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದರೂ, ಸರ್ಕಾರಿ ಶಾಲೆಗಳ ಫಲಿತಾಂಶ ಪ್ರಮಾಣ ಇಳಿಮುಖ ಆತಂಕದ ಸಂಗತಿಯಾಗಿದೆ. ಫಲಿತಾಂಶ ಕಡಿಮೆಯಾಗಲು ಕಾರಣ ಏನೆಂಬುದನ್ನು ಸರ್ಕಾರವೂ ಹುಡುಕುತ್ತಿದೆ. ಇಷ್ಟು ವರ್ಷವಾದರೂ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡಿಲ್ಲ. ಎಲ್ಲೆಡೆ ಉತ್ತಮ ಶಿಕ್ಷಕರು, ಬೋಧಕರನ್ನು ನೇಮಿಸುವುದು ಉತ್ತಮ. ಸರ್ಕಾರಿ ಶಾಲಾ-ಕಾಲೇಜು ಅಭಿವೃದ್ಧಿ, ಮೂಲ ಸೌಕರ್ಯ, ಗುಣಮಟ್ಟದ ಬೋಧನೆ ಮೂಲಕ ಫಲಿತಾಂಶ ಸುಧಾರಣೆಗೆ ಗಮನ ಹರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ.ಉಮಾಪತಿ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯ ಕೈಗೊಳ್ಳಲಿ. ಪಿಯು ಕಾಲೇಜು ಆರಂಭಿಸುವ ಮೂಲಕ ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಸ್ವಾಮಿಗಳ ಹೆಸರನ್ನು ಚಿರಸ್ಥಾಯಿ ಆಗಿಸುವ, ಶ್ರೀಗಳ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ಉಮಾಪತಿ ಹಾಗೂ ಸಮಾಜದ ಮುಖಂಡರು ಸೇರಿ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಡಾ.ಶಾಮನೂರು ಶಿವಶಂಕರಪ್ಪ ಶ್ಲಾಘಿಸಿದರು.

ಸಮಾಜದ ಜಿಲ್ಲಾಧ್ಯಕ್ಷ, ಹಿರಿಯ ಜವಳಿ ವರ್ತಕ ಬಿ.ಸಿ.ಉಮಾಪತಿ ಮಾತನಾಡಿ, ಪಂಚಮಸಾಲಿ ಸಮಾಜ ಸಂಘಟನೆ 2003ರಲ್ಲಿ ಆರಂಭವಾಗಿದ್ದು, 2 ದಶಕದಿಂದಲೂ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ. ಈವರೆಗೆ 4 ಸಾವಿರಕ್ಕಿಂತ ಹೆಚ್ಚು ಪ್ರತಿಭೆಗಳಿಗೆ ಪ್ರೋತ್ಸಾಹಿಸಿದ್ದೇವೆ. ಸಮಾಜದಿಂದ 9 ವರ್ಷದ ಹಿಂದೆ ಹರ ಸೌಹಾರ್ದ ಸಹಕಾರಿ ಸಂಸ್ಥೆ ಆರಂಭಿಸಿದ್ದೇವೆ. ಸಮಾಜ ಬಾಂಧವರ ಒತ್ತಾಯದಂತೆ ಹರ ಶಿಕ್ಷಣ ಸಂಸ್ಥೆಯಿಂದ ನಮ್ಮ ಸಮಾಜದ ಆರಾಧ್ಯ ದೈವ ಸಂಭೂತರಾದ ಲಿಂಗೈಕ್ಯ ಡಾ.ಮಹಾಂತ ಸ್ವಾಮೀಜಿ ಹೆಸರಿನ ಪಿಯು ಕಾಲೇಜು ಆರಂಭಿಸಿದ್ದೇವೆ ಎಂದರು.

ಕಾಲೇಜಿನ ಕಾರ್ಯಕಾರಿ ಮಂಡಳಿಯ ಎಸ್.ಕೆ.ಶ್ರೀಧರ್, ವಾಣಿ ಶಿವಣ್ಣ, ಎಂ.ದೊಡ್ಡಪ್ಪ, ಅಂದನೂರು ಮುರುಗೇಶ, ಡಾ.ರುದ್ರಮುನಿ ಅಂದನೂರು, ಎಂ.ದೊಡ್ಡಪ್ಪ, ಅಂದನೂರು ಆನಂದಕುಮಾರ, ಕೆ.ಎನ್.ರಾಜಶೇಖರ, ಕಂಚಿಕೇರಿ ಮಹೇಶ, ಬಾದಾಮಿ ಜಯಣ್ಣ, ಎಚ್.ಎಂ.ನಾಗರಾಜ, ಎಚ್.ಎಸ್.ಅವ್ವಣ್ಣಪ್ಪ, ಕೆ.ಶಿವಕುಮಾರ, ಬೇತೂರು ಜಗದೀಶ, ಎಚ್.ಎಂ.ನಾಗರಾಜ, ಎ.ಎಸ್.ಬಸವರಾಜ ಅಣ್ಣಾಪುರ, ಎಂ.ವಿ.ವೀರೇಂದ್ರಕುಮಾರ, ಕೆ.ಶಿವಕುಮಾರ, ರವಿಕುಮಾರ ಬಾತಿ ಇತರರು ಇದ್ದರು.

ಸಮಾಜದ ಸಾಧಕರಾದ ಪ್ರಸಿದ್ಧ ವೈದ್ಯ ಡಾ.ಎಸ್.ಎಂ.ಎಲಿ, ಉದ್ಯಮಿ ಎಸ್.ಕೆ.ವೀರಣ್ಣ, ಅಭಾವೀಮ ಜಗಳೂರು ಅಧ್ಯಕ್ಷ ಎನ್.ಸಿ.ಅಜ್ಜಯ್ಯ ನಾಡಿಗರ್, ಹರಿಹರ ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯ 120 ಮಕ್ಕಳು, ಪಿಯುಸಿಯ 90 ಸೇರಿದಂತೆ 120 ಮಕ್ಕಳಿಗೆ ಪ್ರತಿಭಾ ಪುರಸ್ಕರ ನೀಡಿ, ಪ್ರೋತ್ಸಾಹಿಸಲಾಯಿತು.

- - -

ಕೋಟ್ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕೆಂಬ ಕಾರಣಕ್ಕೆ ಈಚೆಗೆ ಎಲ್ಲಾ ಸಮಾಜಗಳೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರಕ್ಕಾಗಿಯೇ ಪ್ರತಿ ವರ್ಷ ₹1 ಕೋಟಿ ಖರ್ಚು ಮಾಡಲಾಗುತ್ತಿದೆ

- ಡಾ.ಶಾಮನೂರು ಶಿ‍ವಶಂಕರಪ್ಪ, ಶಾಸಕ,

ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

- - - ಟಾಪ್‌ ಕೋಟ್‌ ಶಿಕ್ಷಣ ಸಂಸ್ಥೆ ಆರಂಭಿಸುವ ಪೂರ್ವದಲ್ಲಿ ನಡೆದ ಸಭೆಯಲ್ಲಿ ಸಮಾಜದ ಗಣ್ಯರು, ಸಮಾಜ ಬಾಂಧವರು ತನು, ಮನ, ಧನದಿಂದ ಸಹಕರಿಸುವ ಭರವಸೆ ನೀಡಿ, ಕಾಲೇಜು ಸ್ಥಾಪಿಸಲು ಧೈರ್ಯ ತುಂಬಿದರು. ಹಾಗಾಗಿ ಹರ ಶಿಕ್ಷಣ ಸಂಸ್ಥೆ ಶುರುವಾಯಿತು. ಸಮಾಜ ಬಾಂಧವರು ಇದರ ಸದುಪಯೋಗ ಪಡೆಯಬೇಕು

- ಬಿ.ಸಿ.ಉಮಾಪತಿ, ಜಿಲ್ಲಾಧ್ಯಕ್ಷ

- - - -14ಕೆಡಿವಿಜಿ4:

ದಾವಣಗೆರೆಯಲ್ಲಿ ಡಾ.ಮಹಾಂತ ಸ್ವಾಮಿ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ ಸೇರಿದಂತೆ ಸಾಧಕರಿಗೆ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಸಮಾಜದ ಅಧ್ಯಕ್ಷ ಬಿ.ಸಿ.ಉಮಾಪತಿ ಉದ್ಘಾಟಿಸಿದರು.