ಸಾರಾಂಶ
ಬಳ್ಳಾರಿ: ವೀರವನಿತೆ ಒನಕೆ ಓಬವ್ವಳ ಸಾಹಸ, ದೇಶಪ್ರೇಮ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಮಹಿಳೆಯರು ಓಬವ್ವಳನ್ನು ಮಾದರಿಯನ್ನಾಗಿಸಿಕೊಂಡು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೇಯರ್ ಮುಲ್ಲಂಗಿ ನಂದೀಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯದ ಮನೋಭಾವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವನ ವೀರತನ ಎಲ್ಲರಿಗೂ ಮಾದರಿಯಾಗಿದೆ. ಹೆಣ್ಣು ಮಕ್ಕಳು ಓಬವ್ವನ ಧೈರ್ಯ ಮತ್ತು ಸಾಹಸವನ್ನು ಆಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಂಗಾವತಿಯ ಸಾಹಿತಿ ಹಾಗೂ ಚಿಂತಕರಾದ ಡಾ. ಲಿಂಗಣ್ಣ ಜಂಗಮನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡಿ, ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ. ಒನಕೆ ಓಬವ್ವ ಮತ್ತು ಚಿತ್ರದುರ್ಗ ಕೋಟೆಯ ಇತಿಹಾಸ ಹಾಸುಹೊಕ್ಕಾಗಿದೆ. ಹೈದರ್ ಅಲಿಯ ಕ್ರೂರ ಸೈನಿಕರನ್ನು ತನ್ನ ಕೊನೆಯ ಉಸಿರು ಇರುವವರೆಗೂ ಎದುರಿಸಿದ ಕರ್ನಾಟಕದ ಯೋಧೆ ಎಂದೇ ಹೆಸರುವಾಸಿಯಾಗಿದ್ದಾರೆ ಎಂದರು.ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಹೈದರಾಲಿ ಸೈನ್ಯ ಕೋಟೆಯ ಮೇಲೆ ದಾಳಿ ಮಾಡಿದಾಗ ವೀರತನದಿಂದ ಸೈನ್ಯವನ್ನು ಹಿಮ್ಮೆಟ್ಟಿದ ದಿಟ್ಟ ಮಹಿಳೆ ಎಂದು ತಿಳಿಸಿದ ಅವರು, ನಿಷ್ಠೆ, ಪರಾಕ್ರಮ, ವೀರತನ, ಸಮಯ ಪ್ರಜ್ಞೆಯನ್ನು ಓಬವ್ವನನ್ನು ನೋಡಿ ಕಲಿಯಬೇಕು. ಆ ಸಮಯದಲ್ಲಿ ಓಬವ್ವ ತೋರಿದ ಧೈರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರ ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ಜಯಂತಿ ಹಾಗೂ ದಿನ ಆಚರಿಸುವುದಿಲ್ಲ. ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಮಹನೀಯರು ನೀಡಿರುವ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳು ಹಾಗೂ ನಿಸ್ವಾರ್ಥ ಸೇವೆ ಗುರುತಿಸಿ ಸರ್ಕಾರದ ನಿಯಮಗಳಡಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕವಿತಾ ಗಂಗೂರ್ ತಂಡ ಸುಗಮ ಸಂಗೀತ ನಡೆಸಿಕೊಟ್ಟಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರರಾದ ಗೌಸಿಯಾ ಬೇಗಂ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಬಳ್ಳಾರಿ ಜಿಲ್ಲಾ ಘಟಕ ಛಲವಾದಿ ಮಹಾಸಭಾ ಅಧ್ಯಕ್ಷ ಸಿ.ಶಿವಕುಮಾರ, ಹಿರಿಯ ಸಾಹಿತಿ ಎನ್.ಡಿ. ವೆಂಕಮ್ಮ, ಸಿ.ಮಂಜುನಾಥ ಸೇರಿದಂತೆ ಸಮಾಜದ ಮುಖಂಡರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಇನ್ನಿತರರು ಉಪಸ್ಥಿತರಿದ್ದರು.ಒನಕೆ ಓಬವ್ವನ ಪರಾಕ್ರಮ, ತ್ಯಾಗ ಮಾದರಿ
ಹಗರಿಬೊಮ್ಮನಹಳ್ಳಿ: ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಿಳಾಮಣಿಗಳ ಆದರ್ಶ ಪಾಲಿಸಬೇಕಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಆಚರಿಸಿದ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು. ನಾಡಿನ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಚಿತ್ರದುರ್ಗದ ರಕ್ಷಣೆಯಲ್ಲಿ ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿದ ಒನಕೆ ಓಬವ್ವನ ಪರಾಕ್ರಮ ಮತ್ತು ತ್ಯಾಗ ಮಾದರಿಯಾಗಿದೆ ಎಂದರು.
ಇದೇವೇಳೆ ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಕಂದಾಯ ಅಧಿಕಾರಿ ಮಾರೆಣ್ಣ ಅವರು ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪುರಸಭೆ ಸದಸ್ಯರಾದ ಈರಣ್ಣ, ಎಲ್.ಗಣೇಶ್, ಮಾಜಿ ಸದಸ್ಯ ಅಲ್ಲಾಭಕ್ಷಿ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಗ್ರಾಪಂ ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ಪುರಸಭೆ ವ್ಯವಸ್ಥಾಪಕ ಚಂದ್ರಶೇಖರ, ಸಮುದಾಯ ಸಂಘಟನಾಧಿಕಾರಿ ಬಸವರಾಜ ಇತರರಿದ್ದರು.