ಕೆರೆಗೆ ಭದ್ರೆ ನೀರು ಹರಿಸುವಂತೆ ಆಗ್ರಹಿಸಿ ಜೆ.ಎನ್.ಕೋಟೆ ಗ್ರಾಮಸ್ಥರು ಭಾನುವಾರ ಶಾಸಕ ವೀರೇಂದ್ರ ಪಪ್ಪಿ ಅವರಿಗೆ ದಿಗ್ಭಂಧನ ವಿಧಿಸಿದ ಹಿನ್ನಲೆ ಶಾಸಕ ವೀರೇಂದ್ರ ಪಪ್ಪಿ ಪ್ರತಿಭಟನಾ ನಿರತರ ಮುಂದೆ ಕುಳಿತು ಊಟ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಮ್ಮೂರ ಕೆರೆಗೆ ಭದ್ರೆ ಬೇಕು ಎಂದು ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ತೀವ್ರಗೊಳಿಸಿದ್ದು ಭಾನುವಾರ ಶಾಸಕ ವೀರೇಂದ್ರ ಪಪ್ಪಿ ಹಾಗೂ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರಿಗೆ ಐದುವರೆ ತಾಸುಗಳ ಕಾಲ ದಿಗ್ಬಂಧನ ವಿಧಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಶನಿವಾರ ಚಿತ್ರದುರ್ಗ ಶಾಖಾ ಕಾಲುವೆಯಿಂದ ಸ್ವಯಂ ವಾಲ್ವ್ ತಿರುವಿಕೊಂಡು ತಮ್ಮ ಕೆರೆಗೆ ನೀರು ಹಾಯಿಸಿಕೊಂಡಿದ್ದ ಜೆ.ಎನ್.ಕೋಟೆ ಗ್ರಾಮಸ್ಥರು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರಾತ್ರಿಯೇ ಪೊಲೀಸರ ಸಹಾಯದಿಂದ ರೈತರ ಕಾಲುವೆಯಿಂದ ಹೊರಗೆ ಕಳಿಸಲಾಯಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಭಾನುವಾರ ಬೆಳಗ್ಗೆಯಿಂದಲೇ ಜೆ.ಎನ್.ಕೋಟೆಯಲ್ಲಿ ರಸ್ತೆ ತಡೆ ಮಾಡಿ ಹೊರಾಟ ಚುರುಕುಗೊಳಿಸಿದ್ದರು. ಮಧ್ಯಾಹ್ನ ಅಹವಾಲು ಆಲಿಸಲು ಬಂದ ಶಾಸಕ ವೀರೇಂದ್ರ ಪಪ್ಪಿ ಹಾಗೂ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರ ಸುತ್ತುವರಿದ ಗ್ರಾಮಸ್ಥರು ಐದು ತಾಸುಗಳ ಕಾಲ ಅಲ್ಲಿಂದ ಕದಲದಂತೆ ದಿಗ್ಬಂಧನ ವಿಧಿಸಿದರು.

ಶಾಖಾ ಕಾಲುವೆಯಿಂದ ಕೆರೆಗೆ ನೀರು ಹರಿಸಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಮಾತಿನ ವಾಗ್ವಾದ್ದ ನಡೆಯಿತು. ಒಂದು ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ರೈತರು ಸುತ್ತುವರಿದಿದ್ದರಿಂದ ಎಲ್ಲಿಗೂ ಹೋಗಲು ಶಾಸಕ ವೀರೇಂದ್ರ ಪಪ್ಪಿಗೆ ಸಾಧ್ಯವಾಗಲಿಲ್ಲ. ಕುಳಿತ ಜಾಗಕ್ಕೆ ಗ್ರಾಮಸ್ಥರು ತಂದು ಕೊಟ್ಟ ಊಟ ಸೇವನೆ ಮಾಡಬೇಕಾಯಿತು.

ಪ್ರತಿಭಟನಾ ಸ್ಥಳದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರ ಸಂಪರ್ಕಿಸಿದ ಶಾಸಕ ವೀರೇಂದ್ರ ಪಪ್ಪಿ ವಾಸ್ತವಾಂಶ ವಿವರಿಸಿದ್ದಾರೆ. ರಾಣಿಕೆರೆಗೆ ನೀರು ಹೋಗುವ ತನಕ ಬೇರೆ ಯಾವುದೇ ಕೆರೆಗೆ ಹಾಯಿಸಲು ಸಾಧ್ಯವಿಲ್ಲ. ಪ್ರತಿಭಟನಾ ನಿರತರ ಮನವೊಲಿಸುವಂತೆ ರಘುಮೂರ್ತಿ ಅವರು ಸೂಚಿಸಿದ್ದಾರೆ. ನಂತರ ಕುಳಿತ ಜಾಗದಿಂದಲೇ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಂಪರ್ಕ ಮಾಡಿದ ಶಾಸಕ ವೀರೇಂದ್ರ ಪಪ್ಪಿ ರೈತರ ಬಿಗಿ ನಿಲುವು ಸ್ಪಷ್ಟಪಡಿಸಿದ್ದಾರೆ. ಏನಾದರೂ ಮಾಡಿ ಸ್ವಲ್ವವಾದರೂ ಕೆರೆಗೆ ನೀರು ಹರಿಸುವ ಭರವಸೆ ನೀಡುವಂತೆ ವಿನಂತಿಸಿದ್ದಾರೆ.

ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲೂಕಿನ ಬಹುತೇಕ ಕೆರೆಗಳ ಭರ್ತಿ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ಒಂದು ಕೆರೆಗೆ ಮಾತ್ರ ನೀರು ಕೇಳುತ್ತಿದ್ದೇವೆ. ಚುನಾವಣೆ ಇದೇ ಅನ್ನುವ ಕಾರಣಕ್ಕೆ ಹಿರಿಯೂರಿಗೆ ಯಥೇಚ್ಚ ನೀರು ಪೂರೈಕೆ ಮಾಡಲಾಗಿದೆ. ನಮ್ಮೂರ ಕೆರೆಗೆ ನೀರು ಕೊಡಲು ಯಾಕಿಷ್ಟು ತಾತ್ಸಾರ ಎಂದು ರೈತರು ಪ್ರಶ್ನಿಸಿದರು.

ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಸಂಜೆ ಐದುವರೆಗೆ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸುವ ಸಂದೇಶ ರವಾನಿಸಿದರು. ಸರ್ಕಾರದಿಂದ ಮೊದಲ ಬಾರಿಗೆ ಮೂರು ಟಿಎಂಸಿ ನೀರು ಮಂಜೂರು ಮಾಡಿಸಿಕೊಂಡು ಬಂದಾಗ ಚಳ್ಳಕೆರೆ ತಾಲೂಕಿಗೆ ಒಂದು ಹನಿ ಕೂಡಾ ಹೋಗಿಲ್ಲ. ಸಚಿವನಾಗಿ ನನ್ನ ಕ್ಷೇತ್ರಕ್ಕೆ ನೀರು ಒಯ್ಯಬಾರದೇ. ನನ್ನ ಕ್ಷೇತ್ರದ ಜನ ನಿತ್ಯವೂ ಪ್ರಶ್ನೆ ಮಾಡುತ್ತಿದ್ದಾರೆಂದು ರೈತರ ಮುಂದೆ ಅಭಿಪ್ರಾಯವ ಹರವಿದರು.

ಸಚಿವನಾಗಿ ನನ್ನ ನಿಲುವಿನಿಂದ ಒಂದು ಹೆಜ್ಜೆ ಹಿಂದೆ ಸರಿಯುವೆ, ತಾವೂ ಕೂಡಾ ಪಟ್ಟು ಬದಲಾಯಿಸಬೇಕೆಂದು ಅಂತಿಮ ಮಾತುಕತೆ ಆರಂಭಿಸಿದ ಸಚಿವ ರಘುಮೂರ್ತಿ, ಈ ಮೊದಲು ನಾನು ರಾಣಿಕೆರೆಗೆ ನೀರು ಹೋಗುವ ತನಕ ಎಲ್ಲಿಗೂ ಕೊಡಲ್ಲವೆಂದು ತೀರ್ಮಾನಿಸಿದ್ದೆ. ಈಗ ಅದನ್ನು ಸಡಿಲಗೊಳಿಸಿದ್ದೇನೆ. ಚಿಕ್ಕ ಮಧುರೆ ಕೆರೆ ತುಂಬಿದ ತಕ್ಷಣ ಜೆ.ಎನ್.ಕೋಟೆ ಕೆರೆಗೆ ನೀರು ಹಾಯಿಸುತ್ತೇನೆ. ಇನ್ನೂ ಹತ್ತು ದಿನ ಭದ್ರೆ ನೀರು ಹರಿಯುತ್ತದೆ. ರೈತರು ಸಮಾಧಾನದಿಂದ ಸರ್ಕಾರದ ಅಭಿಪ್ರಾಯ ಗೌರವಿಸಬೇಕೆಂದು ಹೇಳಿದರು.

ಸಚಿವರ ಮಾತಿಗೆ ಒಪ್ಪಿ ರೈತರು ಹೋರಾಟದಿಂದ ಹಿಂದೆ ಸರಿದರು.

ಶಾಸಕ ವೀರೇಂದ್ರ ಪಪ್ಪಿ ಮಾತನಾಡಿ, ನಾವು ಕೊಟ್ಟ ಮಾತನ್ನು ಮರೆಯುವುದಿಲ್ಲ. ಚಿಕ್ಕಮಧುರೆ ಕೆರೆ ಭರ್ತಿಯಾದ ತಕ್ಷಣ ಸಚಿವರು ಹಾಗೂ ತಾವು ಖುದ್ದು ಹಾಜರಾಗಿ ಜೆ.ಎನ್.ಕೋಟೆ ಕೆರೆಗೆ ನೀರು ಹಾಯಿಸುವುದಾಗಿ ಹೇಳಿದ ನಂತರ ರೈತರು ನಿರ್ಗಮಿಸಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಕರಿಬಸಣ್ಣ, ಸಜ್ಜನಕೆರೆ ಶಿವಣ್ಣ, ಈ ವೇಳೆ ಉಪಸ್ಥಿತರಿದ್ದರು.