ಸಾರಾಂಶ
ಕೊಪ್ಪಳ: ನ್ಯಾಯಾಲಯದ ನಿರ್ದೇಶನದಂತೆ ಹುಲಿಗೆಮ್ಮದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಿಜೆಪಿ ಮುಖಂಡ ವೀರೇಶ್ ಸಮಿತಿಯ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಸ್ಯರನ್ನು ನೇಮಕ ಮಾಡಿ, ಸಮಿತಿಯನ್ನು ರಚನೆ ಮಾಡಲಾಗಿತ್ತು. ಆದರೆ, ಈಗ ಅವಧಿಗೂ ಮುನ್ನವೇ ಸಮಿತಿಯನ್ನು ರದ್ದು ಮಾಡಿ, ಹೊಸ ಸದಸ್ಯರ ನೇಮಕ ಮತ್ತು ಅಧ್ಯಕ್ಷರ ಆಯ್ಕೆಗೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಪತ್ರ ಬರೆದಿದ್ದರು. ಇದರಿಂದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸ್ಥಗಿತವಾಗಿತ್ತು. ಈಗ ನ್ಯಾಯಾಲಯದ ಆದೇಶದಿಂದ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ.
ಒಂದು ಬಾರಿ ಸಮಿತಿ ರಚನೆಯಾದರೆ 3 ವರ್ಷ ಅಧಿಕಾರ ಇದ್ದರೂ ಶಾಸಕ ಹಿಟ್ನಾಳ್ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿ ಸಮಿತಿಯ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು ಸಮಿತಿಯನ್ನು ಮುಂದುವರಿಸಿ, ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ಅಧ್ಯಕ್ಷರ ಆಯ್ಕೆ ಜರುಗಿದ್ದು, ವೀರೇಶ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹಿನ್ನಡೆ: ಸಮಿತಿಯ ಅವಧಿ ಇದ್ದರೂ ಹುಲಿಗೆಮ್ಮದೇವಿ ಅಭಿವೃದ್ಧಿ ಸಮಿತಿಗೆ ಪರ್ಯಾಯ ಸದಸ್ಯರ ನೇಮಕ ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಹಿನ್ನಡೆಯಾದಂತಾಗಿದೆ.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಳಿಕ ಬಿಜೆಪಿ ಮುಖಂಡ ಅಮರೇಶ ಕರಡಿ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಅಧಿಕಾರ ಸ್ವೀಕಾರ ವೇಳೆ ತಾಪಂ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಹುಲಗಿ ಗ್ರಾಮದ ಹಿರಿಯರಾದ ಕೊಟ್ರಯ್ಯ ಸ್ವಾಮಿ ಹಿರೇಮಠ, ಶರಣಪ್ಪ ಆನೆಗೊಂದಿ, ಮಂಜುನಾಥ ಪಾಟೀಲ್ ಹಂದ್ರಾಳ್, ಮಾಜಿ ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರು, ಬಿಜೆಪಿ ಮುಖಂಡ ಗಣೇಶ್ ಹೊರಟ್ನಾಳ್ ಸೇರಿ ಹುಲಗಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಸರ್ಕಾರದಿಂದ ನೇಮಕವಾದ ಸದಸ್ಯರ ಅವಧಿ ಇನ್ನು ಇದ್ದರೂ ಅಧ್ಯಕ್ಷರ ಆಯ್ಕೆಗೆ ಅಡ್ಡಿ ಮಾಡಲಾಗಿತ್ತು. ಹೀಗಾಗಿ, ನ್ಯಾಯಾಲಯದ ಆದೇಶಾನುಸಾರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.
ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಲಿ ಎನ್ನುತ್ತಾರೆ ಬಿಜೆಪಿ ಮುಖಂಡ ಅಮರೇಶ ಕರಡಿ.ಹುಲಿಗೆಮ್ಮ ದೇವಸ್ಥಾನ ಸಮಿತಿಗೆ ನ್ಯಾಯಾಲಯದ ಆದೇಶದಂತೆ ಆಯ್ಕೆ ಮಾಡಿದ್ದರೆ ಮಾಡಿಕೊಳ್ಳಲಿ.
ಆದರೆ, ನಾನು ಪತ್ರ ಬರೆದಿರುವುದು ಈಗಲ್ಲ, ಈ ಹಿಂದೆಯೇ ಬರೆದಿದ್ದೇನೆ. ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಆಗಲಿದೆ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.