ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗ ನೆಲದಲ್ಲಿ ಕನ್ನಡ ಕಟ್ಟುವಲ್ಲಿ ಕೆ.ಎಂ.ವೀರೇಶ್ ಶ್ರಮ ಅಪಾರವೆಂದು ಖ್ಯಾತ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಬಣ್ಣಿಸಿದರು.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿರುವುದಕ್ಕೆ ಕೋಟೆ ನಾಡಿನ ಗೆಳೆಯರ ಬಳಗದವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಾಕಷ್ಟು ಬಡವರ ಜೀವನಕ್ಕೆ ದಾರಿ ತೋರಿಸಿರುವ ಕೆ.ಎಂ.ವೀರೇಶ್ ಅವರು ಒಳ್ಳೆಯ ಕಲಾವಿದರೂ ಹೌದು. ವೀರಸನ್ಯಾಸಿ ಸ್ವಾಮಿ ವಿವೇಕಾನಂದ, ಮುರುಘಾಸ್ವಾಮಿ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದರು. ಅನೇಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು ಇವರ ಉದಾರತನ. ಕಲಾವಿದರಿಗೆ, ಲೇಖಕರಿಗೆ ಆಶ್ರಯ ನೀಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆದಿದ್ದಂತೂ ಅತ್ಯಂತ ಸಂತೋಷದ ಸಂಗತಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ವೀರೇಶ್ ಚಿತ್ರದುರ್ಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ನಡೆಸಲು ಹೊರಟಿರುವುದು ಇನ್ನು ಖುಷಿಯ ವಿಚಾರ. ಚಿತ್ರದುರ್ಗ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಸ್ಥಳ. ಮುರುಘಾ ಪರಂಪರೆಯ ಯತಿಗಳ ಸಾಹಿತ್ಯ ಸೇವೆ ಕೂಡ ಅಪಾರವಾಗಿದೆ ಎಂದು ನೆನಪಿಸಿಕೊಂಡರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ವೀರೇಶ್, ಶಿಕ್ಷಣ ರಂಗದಲ್ಲಿ ನಾನು ಸಲ್ಲಿಸಿರುವ ಸೇವೆ ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಸಂತಸವಾಗಿದೆ. ಅಪಾರ ಅಭಿಮಾನಿಗಳು ನನ್ನನ್ನು ಗೌರವಿಸುತ್ತಿರುವುದಕ್ಕೆ ಚಿರಋಣಿಯಾಗಿದ್ದೇನೆಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ವೀರೇಶ್ ಅವರ ಕಾಳಜಿಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿರುವುದು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕನ್ನಡಾಂಭೆಗೆ ಸೇವೆ ಸಲ್ಲಿಸಿರುವ ಇವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಶುಭ ಹಾರೈಸಿದರು.ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಪಿ.ಯಶೋಧ ಬಿ.ರಾಜಶೇಖರಪ್ಪ, ನಾಗರಾಜ್ ಸಂಗಮ್, ಕೆಇಬಿ.ಷಣ್ಮುಖಪ್ಪ, ಸೋಮು, ಕಿರಣ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.