ಸಾರಾಂಶ
ತರಕಾರಿಗಳು ಸಮತೋಲಿನ ಆಹಾರದ ಅನಿವಾರ್ಯ ಭಾಗವಾಗಿದೆ. ಆದ್ದರಿಂದ ರೈತರು ತರಕಾರಿ ಬೆಳೆಗಳನ್ನು ಬೆಳೆಸಿ ಲಾಭದಾಯಕ ಕೃಷಿಯನ್ನಾಗಿ ಮಾಡಿ ಆರ್ಥಿಕವಾಗಿ ಸಬಲರಾಗಬೇಕು.
ಹಳಿಯಾಳ: ದೇಶದ ಕೃಷಿ ಅಭಿವೃದ್ಧಿ ಮತ್ತು ಆರ್ಥಿಕತೆಯಲ್ಲಿ ತರಕಾರಿ ಕೃಷಿಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತರಕಾರಿ ಕೃಷಿಯು ಅನೇಕ ಜನರ ಆದಾಯದ ಪ್ರಮುಖ ಮೂಲವಾಗಿದ್ದು, ಇಂದು ತರಕಾರಿ ಕೃಷಿಯು ಲಾಭದಾಯಕ ಬೇಸಾಯವಾಗಿ ಪರಿಣಮಿಸಿದೆ ಎಂದು ಹಳಿಯಾಳ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಕಾರಿಕೆ ಅಧಿಕಾರಿ ನಿಂಗಪ್ಪ ತಿಳಿಸಿದರು.
ತಾಲೂಕಿನ ಖಾಮಡೊಳ್ಳಿ ಗ್ರಾಮದಲ್ಲಿ ಜೆಎಸ್‌ಡಬ್ಲ್ಯು ಫೌಂಡೇಶನ್ ಸಹಕಾರದಲ್ಲಿ ಸ್ವ ಸಹಾಯ ಸಂಘದ ಮಹಿಳಾ ರೈತರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತರಕಾರಿ ಬೆಳೆ ಬೇಸಾಯ ಕ್ರಮಗಳು ಮತ್ತು ಸಸ್ಯರೋಗ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತರಕಾರಿಗಳು ಸಮತೋಲಿನ ಆಹಾರದ ಅನಿವಾರ್ಯ ಭಾಗವಾಗಿದೆ. ಆದ್ದರಿಂದ ರೈತರು ತರಕಾರಿ ಬೆಳೆಗಳನ್ನು ಬೆಳೆಸಿ ಲಾಭದಾಯಕ ಕೃಷಿಯನ್ನಾಗಿ ಮಾಡಿ ಆರ್ಥಿಕವಾಗಿ ಸಬಲರಾಗಬೇಕೆಂದರು.ಸಿಬಿಡಿಆರ್ಸೆಟಿಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಸ್ವ- ಸಹಾಯ ಸಂಘದ ರೈತ ಮಹಿಳೆಯರನ್ನು ಗುರಿಯಾಗಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಹೆಚ್ಚೆಚ್ಚು ಬೆಳೆದು ಆರ್ಥಿಕವಾಗಿ ಸಬಲರಾಗಲು ಜೆಎಸ್‌ಡಬ್ಲ್ಯು ಫೌಂಡೇಶನ್ ಸಹಕಾರದೊಂದಿಗೆ ತರಬೇತಿಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಚಿಬ್ಬಲಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಧಾರವಾಡ್ಕರ್, ಖಾಮಡೊಳ್ಳಿ ಶಾಲೆಯ ಶಿಕ್ಷಕಿ ಶಾಂತಲಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಮೇಲ್ವಿಚಾರಕ ವಿಷ್ಣು ಮಡಿವಾಳ ಕಾರ್ಯಕ್ರಮವನ್ನು ಸಂಘಟಿಸಿದ್ದರು.