ಸಾರಾಂಶ
ತರಕಾರಿ ಆಮದು: ಮಾರುಕಟ್ಟೆ ಎದುರು ರೈತ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಜ್ಜರಿ ಸೇರಿದಂತೆ ಇನ್ನಿತರ ತರಕಾರಿಗಳನ್ನು ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜೈಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಎದುರು ರಸ್ತೆಯಲ್ಲೇ ಮಲಗಿ, ಮೈಮೇಲೆ ಗಜ್ಜರಿ ಸುರಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.ಈಗಾಗಲೇ ಬರಗಾಲದಿಂದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ. ಇದೀಗ ಸಗಟು ದಲ್ಲಾಳಿಗಳು, ತರಕಾರಿ ವ್ಯಾಪಾರಿಗಳು ತರಕಾರಿಗಳನ್ನು ನಾಗ್ಪುರ, ಬೆಂಗಳೂರು ಸೇರಿ ಹೊರವಲಯದ ವ್ಯಾಪಾರಿಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರು ಬೆಳೆದ ತರಕಾರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದರು.
ರೈತ ಸಂಘದ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, ಬರಪೀಡಿತ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ. ಸರ್ಕಾರದ ಇಲಾಖೆಗಳು ಮತ್ತು ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಎಪಿಎಂಸಿ ಇತ್ಯಾದಿ ವ್ಯವಸ್ಥೆಗಳೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಬರುತ್ತಿಲ್ಲ. ಸರ್ಕಾರ ಮಧ್ಯಪ್ರವೇಶಿಸಿ ಇದನ್ನು ತಡೆದು ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.