ಸಾರಾಂಶ
ಶರಣು ಸೊಲಗಿ ಮುಂಡರಗಿ
2-3 ವಾರಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಸೊಪ್ಪುಗಳ ಬೆಲೆ ಮುಗಿಲು ಮುಟ್ಟಿದ್ದು, ನಿತ್ಯವೂ ಕೊಳ್ಳುವ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಮುಂಡರಗಿ ತಾಲೂಕಿನಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗದ ಕಾರಣ ರೈತರು ಅಷ್ಟೊಂದು ತರಕಾರಿ ಬೆಳೆದಿಲ್ಲ. ಜತೆಗೆ ಇದ್ದ ಅಲ್ಪಸ್ವಲ್ಪ ರೈತರ ಜಮೀನಿನಲ್ಲಿ ಬೆಳೆದ ತರಕಾರಿ ಪ್ರಸ್ತುತ ವರ್ಷದ ಬೇಸಿಗೆ ಬಿಸಿಲಿನ ಬೇಗೆಗೆ ಬಾಡಿ, ಒಣಗಿ ಹೋಗಿವೆ. ತರಕಾರಿ ಹಾಗೂ ಸೊಪ್ಪು ಬೆಲೆ ಏರಿಕೆಯಾಗಲು ಇದು ಪ್ರಮುಖ ಕಾರಣವಾಗಿದೆ.
ಮುಂಡರಗಿ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಹಿರೇಕಾಯಿಗೆ ₹80ರಿಂದ ₹100, ಕೆಜಿ ಸೌತೆಕಾಯಿಗೆ ₹ 80ರಿಂದ ₹ 100, ಕೆಜಿ ಬದನೇಕಾಯಿಗೆ ₹80, ಕೆಜಿ ಗಜ್ಜರಿಗೆ ₹ 80, ಕೆಜಿ ಬೆಂಡಿಕಾಯಿಗೆ ₹80, ಪ್ಲಾವರ್ 1 ಪೀಸ್‌ಗೆ ₹30ರಿಂದ ₹ 40, ಕೆಜಿ ಎಲೆಕೋಸು ₹80, ಕೆಜಿ ಬೀಟ್ ರೂಟ್ ₹ 80ರಿಂದ 100, ಕೆಜಿ ಬೀನ್ಸ್‌ಗೆ ₹200, ಕೆಜಿ ಹಾಗಲಕಾಯಿ ₹ 80, ಕೆಜಿ ಗುಳ್ಳಗಾಯಿ ₹ 80, ಕೆಜಿ ಆಲೂಗಡ್ಡೆ ₹ 40ರಿಂದ ₹ 60 ಇದೆ.ಕೆಜಿ ಉಳ್ಳಾಗಡ್ಡೆ ₹40, ಕೆಜಿ ಜವಾರಿ ಗಿಡ್ಡ ಮೆಣಸಿನಕಾಯಿ ₹160, ಗುಂಟೂರು ಮೆಣಸಿನಕಾಯಿ ₹100, ಮಿರ್ಚಿ ಮೆಣಸಿನಕಾಯಿ ಕೆಜಿಗೆ ₹80ರಿಂದ 100, ಜವಾರಿ ಡೊಣ್ಣಿ ಮೆಣಸಿನಕಾಯಿ ₹60ರಿಂದ 80, ಕೆಜಿ ಟೊಮೆಟೊ ₹50 ರಿಂದ ₹60 ಹೀಗೆ ತರಕಾರಿ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ತೆಗೆದುಕೊಳ್ಳುವ ಗ್ರಾಹಕರು ಕಾಲು ಕೆಜಿ, ಅರ್ಧ ಕೆಜಿಗೆ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಮನೆಯಲ್ಲಿ ಹೆಚ್ಚು ಜನ ಇರುವವರು ಕಾಳುಕಡಿಗಳ ಮೊರೆ ಹೋಗುತ್ತಿದ್ದಾರೆ.
ಕೇವಲ ತರಕಾರಿ ಮಾತ್ರವಲ್ಲ, ₹5 ರಿಂದ 10 ಇದ್ದ ಕೊತ್ತಂಬರಿ ಒಂದು ಕಟ್ಟಿಗೆ ₹50 ರಿಂದ ₹ 60ಗೆ ಏರಿದೆ. ಇನ್ನು ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಹುಳಚಿಕ್ಕ, ಸಬ್ಬಸಗಿ, ಕರಿಬೇವು ಎಲ್ಲ ಸೊಪ್ಪುಗಳ ದರವೂ ಹೆಚ್ಚಾಗಿದೆ. ಹಳೆ ಹಸಿ ಶುಂಟಿ ಕೆಜಿಗೆ ₹200, ಹೊಸ ಹಸಿಶುಂಟಿ ಕೆಜಿಗೆ ₹ 140 ರಿಂದ ₹ 160 ಆಗಿದೆ. ಕೆಜಿ ಬೆಳ್ಳುಳ್ಳಿ ₹320ರಿಂದ ₹ 350 ಆಗಿದೆ. ಹೀಗಾಗಿ ತರಕಾರಿ, ಸೊಪ್ಪು ಕೊಳ್ಳುವ ಗ್ರಾಹಕರು ಯೋಚಿಸುವಂತಾಗಿದೆ.ಮೊದ್ಲೆಲ್ಲ ಒಂದು ನೂರು ಕೊಟ್ರ ಕೈಚೀಲ ತುಂಬುವಷ್ಟು ಸಂತಿ ಮಾಡಕೊಂಡ್ ಹೋಕ್ಕಿದ್ವಿ. ಆದ್ರ ಇವತ್ತು ₹300 ರಿಂದ ₹400 ಖರ್ಚು ಮಾಡಿದ್ರೂ ಒಂದು ದೊಡ್ ಕೈಚೀಲ ತುಂಬುವಷ್ಟು ತರಕಾರಿ ಬರುವುದಿಲ್ಲ. ₹ 5 ಇದ್ದ ಕೋತ್ತಂಬ್ರಿ ಕಟ್ಟು ₹50 ಆಗೈತಿ. ಬಡೂವ್ರೂ, ಬಗ್ರೂ ಸೊಪ್ಪು, ತರಕಾರಿ ತಿನ್ನೂದಾದ್ರೂ ಹ್ಯಾಂಗ್ರೀ ಎಂದು ಗೃಹಿಣಿ ನಿರ್ಮಲಾ ಬಿ. ಹೇಳಿದರು.