ಮತದಾನ ಮಾಡಲು ವಾಹನ ವ್ಯವಸ್ಥೆ900ಕ್ಕೂ ಅಧಿಕ ಜನರಿಂದ ನೋಂದಣಿ

| Published : May 06 2024, 12:31 AM IST

ಸಾರಾಂಶ

ಚುನಾವಣಾ ಆಯೋಗ ಅಂಗವಿಕಲರಿಗೆ, ೮೫ ವರ್ಷ ಮೇಲ್ಪಟ್ಟವರಿಗೆ ಮತದಾನಕ್ಕೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಜಿ.ಡಿ. ಹೆಗಡೆ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಂಗವಿಕಲರಿಗೆ, ೮೫ ವರ್ಷ ಮೇಲ್ಪಟ್ಟವರಿಗೆ ಮತದಾನದ ದಿನ ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ೯೨೪ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಚುನಾವಣಾ ಆಯೋಗ ಅಂಗವಿಕಲರಿಗೆ, ೮೫ ವರ್ಷ ಮೇಲ್ಪಟ್ಟವರಿಗೆ ಮತದಾನಕ್ಕೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೂಟ್ ಮ್ಯಾಪ್ ಸಿದ್ಧ ಮಾಡಿಕೊಳ್ಳಲಾಗಿದ್ದು, ಆಯಾ ಪ್ರದೇಶದಲ್ಲಿ ಮನವಿ ನೀಡಿದವರ ಮನೆಗೆ ತೆರಳಿ ಸಂಬಂಧಿಸಿದ ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನವಾದ ಬಳಿಕ ಪುನಃ ಅವರನ್ನು ವಾಪಸ್ ಕರೆದುಕೊಂಡು ಬರಲಾಗುತ್ತದೆ.

ಅಂಗವಿಕಲರು: ಅಂಕೋಲಾ ೭೦ ಪುರುಷರು, ೬೪ ಮಹಿಳೆಯರು, ಕುಮಟಾ ೧೦೬ ಪುರುಷರು, ೮೭ ಮಹಿಳೆಯರು, ಹೊನ್ನಾವರ ೩೨ ಪುರುಷರು, ೧೫ ಮಹಿಳೆಯರು, ಭಟ್ಕಳ ೪೩ ಪುರುಷರು, ೩೮ ಮಹಿಳೆಯರು, ಸಿದ್ದಾಪುರ ೫೮ ಪುರುಷರು, ೩೪ ಮಹಿಳೆಯರು, ಯಲ್ಲಾಪುರ ೧೦ ಪುರುಷರು, ೭ ಮಹಿಳೆಯರು, ಹಳಿಯಾಳ ೫೧ ಪುರುಷರು, ೫೩ ಮಹಿಳೆಯರು, ಜೋಯಿಡಾ ೧೧ ಪುರುಷರು, ೭ ಮಹಿಳೆಯರು ವಾಹನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಕಾರವಾರ, ಶಿರಸಿ, ಮುಂಡಗೋಡ ತಾಲೂಕಿನ ಹೊರತಾಗಿ ಉಳಿದ ತಾಲೂಕಿನಲ್ಲಿ ಅಂಗವಿಕಲರಿಂದ ಬೇಡಿಕೆ ಬಂದಿಲ್ಲ.

ಹಿರಿಯ ನಾಗರಿಕರು: ಅಂಕೋಲಾ ೨೮ ಪುರುಷರು, ೪೪ ಮಹಿಳೆಯರು, ಕುಮಟಾ ೪೫ ಪುರುಷರು, ೫೨ ಮಹಿಳೆಯರು, ಯಲ್ಲಾಪುರ ೩ ಪುರುಷರು, 2 ಮಹಿಳೆಯರು, ಹಳಿಯಾಳ ೩೦ ಪುರುಷರು, ೩೮ ಮಹಿಳೆಯರು, ಜೋಯಿಡಾ ೧೫ ಪುರುಷರು, ೨೬ ಮಹಿಳೆಯರು ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಮುಂಡಗೋಡ, ಕಾರವಾರ ತಾಲೂಕಿನಲ್ಲಿ ಯಾರೂ ನೋಂದಣಿ ಮಾಡಿಕೊಂಡಿಲ್ಲ. ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬರುತ್ತಿದ್ದು, ಅಲ್ಲಿನ ಜಿಲ್ಲಾಡಳಿತವೇ ಅಗತ್ಯವಿದ್ದವರಿಗೆ ವಾಹನದ ವ್ಯವಸ್ಥೆಯನ್ನು ಮಾಡಲಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಈ ಜಿಲ್ಲೆಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳಲ್ಲಿ ವಾಹನದ ವ್ಯವಸ್ಥೆಯನ್ನು ಮಾಡಿದೆ.

ಚುನಾವಣೆಯಲ್ಲಿ ಮತದಾನ ಬಹುಮುಖ್ಯವಾದ ಹಂತವಾಗಿದ್ದು, ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅಂಗವಿಕಲರಿಗೆ, ೮೫ ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಇದರೊಂದಿಗೆ ಮತಗಟ್ಟೆಗೆ ಬಂದು ಮತಹಾಕಲು ಇಚ್ಛಿಸುವವರಿಗೆ ವಾಹನದ ವ್ಯವಸ್ಥೆ ಇಲ್ಲದಿದ್ದರೆ ಜಿಲ್ಲಾ ಚುನಾವಣಾ ಆಯೋಗವೇ ಈ ವ್ಯವಸ್ಥೆಯನ್ನು ಮಾಡುತ್ತಿದೆ. ಮಾರ್ಗದರ್ಶನ: ಜಿಲ್ಲಾ ಚುನಾವಣಾಧಿಕಾರಿ(ಡಿಸಿ) ಮಾರ್ಗದರ್ಶನದಲ್ಲಿ ವಾಹನದ ವ್ಯವಸ್ಥೆ ಅವಶ್ಯಕತೆ ಇರುವವರನ್ನು ಗುರುತಿಸಲಾಗಿದೆ. ಒಟ್ಟು ೯೨೪ ಜನರು ಹೆಸರನ್ನು ನೀಡಿದ್ದು, ಇಂತಹವರ ಮನೆಗೆ ಮೇ ೭ ಮತದಾನದ ದಿನ ಜಿಲ್ಲಾಡಳಿತದಿಂದಲೇ ವಾಹನವನ್ನು ಕಳಿಸಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿ ಬಳಿಕ ವಾಪಸ್ ಅವರ ಮನೆಗೆ ಬಿಡಲಾಗುತ್ತದೆ. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಘವೇಂದ್ರ ಭಟ್ ತಿಳಿಸಿದರು.