ಸಮರ್ಪಕ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಸೀಜ್

| Published : Jan 06 2024, 02:00 AM IST / Updated: Jan 06 2024, 10:49 AM IST

ಸಮರ್ಪಕ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಸೀಜ್
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮ ಪಾಲನೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಥರ್ಡ್‌ ಐ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಂಬರ್ ಪ್ಲೇಟ್ ಇಲ್ಲದೇ  ಸಂಚರಿಸುತ್ತದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ.

ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮ ಪಾಲನೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಥರ್ಡ್‌ ಐ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿದ್ದ ನೂರಾರು ವಾಹನಗಳನ್ನು ಶುಕ್ರವಾರ ಪೊಲೀಸ್ ಇಲಾಖೆ ವಿಶೇಷ ಡ್ರೈವ್ ನಡೆಸಿ, ಇಲಾಖೆ ಮೋಸ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. 

ಹೆಲ್ಮೆಟ್ ಧರಿಸದೇ ಇರುವುದು, ಸಿಗ್ನಲ್ ಬ್ರೇಕ್ ಮಾಡುವುದು, ಒನ್ ವೇ ನಲ್ಲಿ ಸಂಚಾರ ಹೀಗೆ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವವರಿಗೆ ಗದಗ ಪೊಲೀಸ್ ಇಲಾಖೆ ಥರ್ಡ್‌ ಐ ಯೋಜನೆಯ ಮೂಲಕ ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ 56ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿ, ಕಂಟ್ರೋಲ್ ರೂಂ ಸ್ಥಾಪಿಸಿ, ತಪ್ಪಿತಸ್ಥರಿಗೆ ವಾಹನಗಳ ನಂಬರ್ ಪ್ಲೇಟ್ ಗಳ ಆಧಾರದಲ್ಲಿ ಇರುವ ವಿಳಾಸಕ್ಕೆ ದಂಡ ವಿಧಿಸಲು ಪ್ರಾರಂಭಿಸಿದ್ದರು. 

ಇದು ಪ್ರಾರಂಭದಲ್ಲಿ ಅವಳಿ ನಗರದಲ್ಲಿ ವ್ಯಾಪಕ ಚರ್ಚೆ ಮತ್ತು ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ ಚಾಲಾಕಿ ಯುವಕರು ತಮ್ಮ ವಾಹನಗಳ ನಂಬರ್ ಪ್ಲೇಟ್‌ಗಳನ್ನೇ ತೆಗೆದು ಹಾಕುವುದು, ಅವುಗಳು ಕ್ಯಾಮೆರಾ ಕಣ್ಣಿಗೆ ಬೀಳದಂತೆ ಬೆಂಡ್ ಮಾಡುವುದು, ನಂಬರ್ ಪ್ಲೇಟ್‌ಗಳಲ್ಲಿನ ಒಂದೇ ನಂಬರ್ ಮರೆಮಾಚುವಂತೆ ಮಾಡುವುದು ಹೀಗೆ ಮಾಡುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದರು. 

ಇದನ್ನು ಕಳೆದ ಕೆಲವು ದಿನಗಳಿಂದ ಸೂಕ್ಷ್ಮವಾಗಿ ಗಮನಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ ಶುಕ್ರವಾರ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಬ‍‍ಳಸಿಕೊಂಡು ಅವಳಿ ನಗರದ ಎಲ್ಲಾ ಪ್ರದೇಶಗಳಲ್ಲಿಯೂ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ 145ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿ, ಕಾನೂನು ಉಲ್ಲಂಘಿಸುವವರಿಗೆ ಭರ್ಜರಿಯಾಗಿಯೇ ಬಿಸಿ ಮುಟ್ಟಿಸಿದರು. 

ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಕೆ ನೀಡಿ ದಂಡ ಭರಿಸಿದ ನಂತರ ವಾಹನಗಳನ್ನು ರಿಲೀಜ್ ಮಾಡಿದರು. ಗದಗ ಜಿಲ್ಲಾ ಪೊಲೀಸ್‌ ವತಿಯಿಂದ ಟ್ರಾಫಿಕ್ ಕಾರ್ಯಾಚರಣೆ ಮೂಲಕ್ ದೋಷಪೂರಿತ ನಂಬರ್ ಪ್ಲೇಟ್ ಮತ್ತು ನಂಬರ್ ಪ್ಲೇಟ್ ಇಲ್ಲದ ವಾಹನ, ನಕಲಿ ನಂಬರ್ ಪ್ಲೇಟ್ ಹೊಂದಿದ ವಾಹನವನ್ನು ಶುಕ್ರವಾರ ವಶಪಡಿಸಿಕೊಂಡು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. 

ಪ್ರಸ್ತುತ ಹಾಗೂ ಮುಂದಿನ ದಿನಮಾನಗಳಲ್ಲಿ ಥರ್ಡ್ ಐ (command and control center) ನ್ ಸಿಸಿ ಕ್ಯಾಮೆರಾಗಳಿಂದ ಕಣ್ಣತಪ್ಪಿಸಿ ಕೊಳ್ಳುತ್ತಿರುವ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು.