7ರಿಂದ 13ರ ವರೆಗೆ ಕಟೀಲು ದೇವಸ್ಥಾನ ನವರಾತ್ರಿ ಪೂಜೆ: ವಾಹನ ಸಂಚಾರ ಬದಲಾವಣೆ

| Published : Oct 06 2024, 01:17 AM IST

ಸಾರಾಂಶ

ರಥ ಬೀದಿಯಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿ(ವಾಹನ ಪೂಜೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ) ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರುಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಪೂಜೆ ಮತ್ತು ಲಲಿತ ಪಂಚಮಿ ಮಹೋತ್ಸವ ಸಮಯ ಅಕ್ಟೋಬರ್ 7ರಿಂದ 13ರ ವೆರೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡುವಂತೆ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್‌ ಆದೇಶ ಹೊರಡಿಸಿದ್ದಾರೆ.

ಮಂಗಳೂರು ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‍ನಿಂದ ಏಕಮುಖವಾಗಿ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರಬೇಕು. ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳು ದೇವಸ್ಥಾನದ ಪದವಿ ಪೂರ್ವ ಕಾಲೇಜು ಮೈದಾನದ ಮೂಲಕ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ-ಮಂಗಳೂರು ಕಡೆಗೆ ಸಂಚರಿಸಬೇಕು. ಉಲ್ಲಂಜೆ ರಸ್ತೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಮತ್ತು ಮಲ್ಲಿಗೆಯಂಗಡಿಯಿಂದ ಕಟೀಲು/ಮಂಗಳೂರು ಕಡೆಗೆ ಹೋಗುವ ವಾಹನಗಳು ಮಲ್ಲಿಗೆಯಂಗಡಿ ಜಂಕ್ಷನ್‍ನಿಂದ ಗಿಡಿಗೆರೆ ರಸ್ತೆಗೆ ಏಕಮುಖವಾಗಿ ಚಲಿಸಿ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರಬೇಕು.

ಕಾರು ಹಾಗೂ ಇತರ ವಾಹನಗಳಿಗೆ ಪದವಿ ಪೂರ್ವ ಕಾಲೇಜು ಮೈದಾನ, ಸಿದ್ಧ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಥ ಬೀದಿಯಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿ(ವಾಹನ ಪೂಜೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ) ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.