ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟ ಆರಂಭ

| Published : Jun 28 2024, 12:50 AM IST

ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಹಿನ್ನೀರಿನ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇದೀಗ ವಾಹನ ಸಂಚಾರ, ಸಾಗಾಟಕ್ಕೆ ಗುರುವಾರದಿಂದ ಅವಕಾಶ ದೊರೆತಿದೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಶರಾವತಿ ಹಿನ್ನೀರಿನ ಹೊಳೆಬಾಗಿಲು-ಅಂಬಾರಗೋಡ್ಲು ಮಾರ್ಗದ ಸಿಗಂದೂರು ಲಾಂಚಿನಲ್ಲಿ ವಾಹನ ಸಾಗಾಟಕ್ಕೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲಿ ಸಹ ನೀರಿನ ಕೊರತೆಯಿಂದ ಲಾಂಚ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಜೂನ್ 5 ರಿಂದ ಸಿಗಂದೂರು ಲಾಂಚಿನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ದ್ವೀಪದ ತುಮರಿ, ಬ್ಯಾಕೋಡು, ಕಟ್ಟಿನಕಾರು, ಹೊಸಕೊಪ್ಪ ಭಾಗದ ಸುಮಾರು 30ಸಾವಿರ ಮಂದಿಗೆ ಅಸ್ಪತ್ರೆಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಗರಕ್ಕೆ ತೆರಳಲು ದಿನನಿತ್ಯ ಅನಾನುಕೂಲ ಉಂಟಾಗಿತ್ತು.

ಶರಾವತಿ ಕಣಿವೆಯಲ್ಲಿ ಉತ್ತಮ ಮಳೆ:

ಕಳೆದೊಂದು ವಾರದಿಂದ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 4 ದಿನಗಳಲ್ಲಿ 3 ಅಡಿ ನೀರು ಏರಿಕೆಯಾಗಿದ್ದು. ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಹೀಗಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಲಾಂಚ್ ಸಿಬ್ಬಂದಿ ದಾಮೋದರ್ ಮಾಹಿತಿ ನೀಡಿದ್ದಾರೆ.

ಸದ್ಯ ವಾಹನ ಸಂಚಾರ ಪುನರಾರಂಭದಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲದಿದ್ದರೆ ನಿಟ್ಟೂರು, ಹೊಸನಗರ ಮಾರ್ಗದ ಮೂಲಕ 90 ಕಿಲೋ ಮೀಟರ್ ಕ್ರಮಿಸಿ ಸಾಗರ ತಲುಪುವ ಪರಿಸ್ಥಿತಿ ಇತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.