ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಭಾಗವಹಿಸಿದ್ದರು.

ಕೊಪ್ಪಳ: ಮಾನವ ಕುಲದ ಏಳಿಗಾಗಿ ಶ್ರಮಿಸಿದ್ದವರು ಮಹಾಯೋಗಿ ವೇಮನವರು ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.

ನಗರದ ಕಿನ್ನಾಳ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಾಯೋಗಿ ವೇಮನರು ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತನೆ ಮಾಡಿ, ಜತೆಗೆ ಸಮಾಜದ ಪರಿವರ್ತನೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಂಕು-ಡೊಂಕು ವ್ಯವಸ್ಥೆ ತಿದ್ದುವಂತಹ ಪ್ರಯತ್ನ ಮಾಡಿದ ವೇಮನರು, ಮನುಷ್ಯರಲ್ಲಿ ಜೀವನ ಮೌಲ್ಯಗಳನ್ನು ಜಾಗ್ರತಗೊಳಿಸಿದ ಸಾಧಕರಾಗಿದ್ದಾರೆ. ಸಮಾಜದಲ್ಲಿ ಮನುಷ್ಯತ್ವದ ಮೌಲ್ಯಗಳು ಶ್ರೇಷ್ಠವಾಗಿವೆ ಎಂದು ತಮ್ಮ ಸಂದೇಶಗಳಲ್ಲಿ ಸಾರಿದ್ದಾರೆ. ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರು ನೀಡಿದ ಬೋಧನೆಯನ್ನು ಅರಿತು ಅಂದಿನ ಕಾಲದ ಸ್ಥಿತಿಗತಿಗಳಿಂದ ವೇಮನರು ಮಹಾಯೋಗಿಗಳಾದರು. ಇಂತಹ ಮಹನೀಯರ ತತ್ವ-ಆದರ್ಶಗಳನ್ನು ತಿಳಿದುಕೊಳ್ಳುವುದಷ್ಟೆ ಅಲ್ಲದೇ, ಅವುಗಳನ್ನು ಪಾಲನೆ ಮಾಡುವುದು ಸಹ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ, 15ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ, ಸಮಾಜ ಚಿಂತಕ, ಮಾನವಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾಯೋಗಿ ವೇಮನರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಕೊಪ್ಪಳದ ನಿವೃತ್ತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇಮನರು ಸರಳ ಭಾಷೆಯಲ್ಲಿ ಚತುಷ್ಪದಿಗಳನ್ನು ರಚಿಸುವ ಮೂಲಕ ಜನರಲ್ಲಿನ ಜೀವನದ ಮೌಲ್ಯಗಳನ್ನು ಜಾಗ್ರತಗೊಳಿಸಿದರು. ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ವೇಮನರ ಪದ್ಯಗಳಿಗೆ ವಿದೇಶಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಜಗತ್ತಿಗೆ ದಾರ್ಶನಿಕರು ಸಿದ್ಧಾಂತಗಳನ್ನು ಬಿಟ್ಟು ಹೋಗಿದ್ದು, ಅವುಗಳ ಮೇಲೆ ನಾವೆಲ್ಲರೂ ನಡೆಯಬೇಕು. ಕಾಲಕಾಲಕ್ಕೆ ಶರಣರು, ಶರಣ ಪರಂಪರೆ, ದಾಸರು, ದಾಸ ಪರಂಪರೆ ಹೀಗೆ ಹಲವಾರು ಮಹನೀಯರು ತಮ್ಮ ತತ್ವಾದರ್ಶಗಳು, ವೈಜ್ಞಾನಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸುವ ಜತೆಗೆ ಮಾನವ ಜೀವನ ವಾಸ್ತವ್ಯಗಳನ್ನು ತಿಳಿಸಿದ್ದಾರೆ. ಅಂತಹ ಮಹನೀಯರಲ್ಲಿ ವೇಮನರು ಒಬ್ಬರು ಎಂದರು.

ಕೃಷ್ಣಾರಡ್ಡಿ ಗಲಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಎಚ್.ಎಲ್. ಹಿರೇಗೌಡರ, ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗ್ನಾಳ, ಮುಖಂಡರಾದ ಬಸವರಾಜ ಪುರದ, ಬಸವರಡ್ಡಿ ಹಳ್ಳಿಕೇರಿ, ಪ್ರಭು ಹೆಬ್ಬಾಳ, ನಿರ್ಮಲಾ ಕಾಶೀನಾಥ ರಡ್ಡಿ ಅವಾಜಿ, ಹನುಮರಡ್ಡಿ ಹಂಗನಕಟ್ಟಿ, ಶಂಕ್ರಗೌಡ ಹಿರೇಗೌಡ್ರ, ನಾಗನಗೌಡ ನಂದಿನಗೌಡ್ರ, ವಿರೂಪಾಕ್ಷಪ್ಪ ನವೋದಯ, ಚಂದ್ರಶೇಖರ ಪಾಟೀಲ ಉಪಸ್ಥಿತರಿದ್ದರು.