ಮನುಕುಲ ಏಳಿಗೆಗೆ ಶ್ರಮಿಸಿದ ಮಹನೀಯ ಕವಿ ವೇಮನ

| Published : Jan 20 2024, 02:04 AM IST

ಸಾರಾಂಶ

ಯೋಗಿ ವೇಮನ ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದರು. ವಾಸ್ತವ ಬದುಕಿಗೆ ಹತ್ತಿರ ಆಗಿರುವಂತೆ, ಜನಸಾಮಾನ್ಯರಿಗೆ ಅರ್ಥವಾಗುವ ಸರಳ, ಸುಲಭ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡಿದ್ದು, ಅಪಾರ ಸಂಖ್ಯೆಯ ಓದುಗರನ್ನು ತಲುಪಿದೆ. 15ನೇ ಶತಮಾನದ ಈ ಪ್ರಸಿದ್ಧ ಈತೆಲುಗು ಕವಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರು. ಅವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗದಲ್ಲಿ ಸ್ಮರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

15ನೇ ಶತಮಾನದ ಪ್ರಸಿದ್ಧ ತೆಲುಗು ಕವಿ, ಶ್ರೇಷ್ಠ ವಚನಕಾರ, ಸಮಾಜಮುಖಿ ಚಿಂತಕ ವೇಮನ ಅವರು ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರು. ಅವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಮಕೃಷ್ಣ, ಬುದ್ಧ, ಬಸವ ಮುಂತಾದ ಲೋಕಪೂಜ್ಯರಂತೆ ಮೇರುಪಂಕ್ತಿಯಲ್ಲಿ ನಿಲ್ಲುವ ಮತ್ತೋರ್ವ ದಿವ್ಯಚೇತನ, ದೈವಾಂಶಸಂಭೂತ, ಸಮಾಜ ಸುಧಾರಕ ಮಹಾಯೋಗಿ ವೇಮನ. ಅವರು ತಮ್ಮ ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದರು. ವಾಸ್ತವ ಬದುಕಿಗೆ ಹತ್ತಿರ ಆಗಿರುವಂತೆ, ಸರಳ, ಸುಲಭ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆ ಬೇರೆ ಭಾóಷೆಗಳಿಗೆ ತರ್ಜುಮೆಗೊಂಡಿದ್ದು, ಅಪಾರ ಸಂಖ್ಯೆಯ ಓದುಗರನ್ನು ತಲುಪಿದೆ ಎಂದರು.

ವೇಮನರ ಹಲವು ಪದ್ಯಗಳಲ್ಲಿನ ಬಳಕೆಯಾಗಿರುವ ಭಾಷೆ, ನುಡಿಗಟ್ಟುಗಳು ಓದುಗರನ್ನು ತನ್ನತ್ತ ಸೆಳೆಯುತ್ತವೆ. ಅವುಗಳಲ್ಲಿ ವಿಶೇಷವಾಗಿ ಯೋಗ, ಬುದ್ಧಿಮತ್ತೆ ಮತ್ತು ನೈತಿಕತೆ ವಿಷಯಗಳು ಒಳಗೊಂಡಿವೆ. ಯೋಗದಲ್ಲಿ ಅವರ ಯಶಸ್ಸು ಹೆಚ್ಚು ಜನಪ್ರಿಯಗೊಳಿಸಿದೆ ಮಾತ್ರವಲ್ಲ ಯೋಗಿ ವೇಮನ ಎಂದೇ ಕರೆಯುವಂತೆ ಮಾಡಿದೆ ಎಂದರು.

ಕವಿ ವೇಮನ ಒಂದೆಡೆ ನೆಲೆಸದೇ ಕಾವ್ಯ ರಚನೆ ಮತ್ತು ಯೋಗದಲ್ಲಿ ಸಾಧನೆ ಮಾಡುತ್ತ, ದೇಶದ ದಕ್ಷಿಣ ರಾಜ್ಯಗಳಲ್ಲಿ ಸಂಚರಿಸಿದ ಸಂತ ಸಾಮಾನ್ಯ ಜೀವನ ನಿರ್ವಹಿಸಿದರು. ಅವರ ಕವಿತೆಗಳಲ್ಲಿ ದ್ವಂದ್ವ, ಗೂಢಾರ್ಥ ಹಾಗೂ ಧ್ವನ್ಯಾಭಿವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬಹುದು. ಕಾವ್ಯಾತ್ಮಕ ಶೈಲಿ ವೇಮನರ ಪದ್ಯಗಳ ಹಲವು ಸಾಲುಗಳು ಪ್ರಸ್ತುತ ಸಂದರ್ಭದಲ್ಲಿ ತೆಲುಗು ಆಡುಭಾಷೆಯ ನುಡಿಗಟ್ಟುಗಳಾಗಿ ಪ್ರಚಲಿತದಲ್ಲಿವೆ. ಅವರ ಕವಿತೆಗಳು ಸಾಮಾಜಿಕ, ನೈತಿಕ, ವಿಡಂಬನಾತ್ಮಕ, ನೈತಿಕ ಮತ್ತು ಅತೀಂದ್ರಿಯ ಸ್ವಭಾವದ ಹಲವು ವಿಧಗಳಾಗಿವೆ ಎಂದ ಅವರು, ಭಕ್ತಿ, ಜ್ಞಾನ, ಕರ್ಮ ಮಾರ್ಗಗಳ ಮೂಲಕ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಅಧ್ಯಕ್ಷ ಎಚ್.ಜಿ.ಭೀಮರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸ್ ಕೆ.ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ನಗರಸಭೆ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ಡಾ.ಶ್ರೀನಿವಾಸ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

- - - ಬಾಕ್ಸ್ ಮಾನವತಾ ಧರ್ಮ, ಅತ್ಯಂತ ಉಸ್ಕೃಷ್ಟ ನಿಲುವು, ವಿಶಾಲ ನೋಟ, ಉದಾರ ಚಿಂತನೆ ಹೊಂದಿದ್ದ ವೇಮನರು ವಿಶ್ವಮಾನವತೆ ಕುರಿತ ಸಂದೇಶ ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಸಹೋದರ ಭಾವ, ವಿಶ್ವಕುಟುಂಬ ಮತ್ತು ದೇಶಪ್ರೇಮ, ಮತ- ಭಾಷೆ- ಪಂಥಗಳ ಎಲ್ಲೆ ಮೀರಿದ ಅವರ ಚಿಂತನೆ, ಸ್ಪಷ್ಟ ನಿಲುವು ಅಸಾಮಾನ್ಯವಾದುದ್ದಾಗಿದೆ. ವೇಮನರ ಅದ್ಭುತ ಆಲೋಚನೆ, ಉನ್ನತ ಔದಾರ್ಯ, ಅವರ ವಿಚಾರ ವಿಷಯಗಳ ವ್ಯಾಪ್ತಿ ಹಿರಿದಾಗಿದೆ. ಸ್ವಾನುಭವವೇ ಅವರನ್ನು ಮಹಾನುಭಾವರನ್ನಾಗಿಸಿದೆ

- ಚನ್ನಬಸಪ್ಪ, ಶಾಸಕ, ಶಿವಮೊಗ್ಗ ಕ್ಷೇತ್ರ

- - -

-19ಎಸ್‌ಎಂಜಿಕೆಪಿ03:

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.