ನೀರಿನ ಸಮಸ್ಯೆ ಉಲ್ಬಣಿಸಲು ನಾಡಗೌಡರೆ ಕಾರಣ: ಹಂಪನಗೌಡ ಬಾದರ್ಲಿ ಆರೋಪ

| Published : Jun 09 2024, 01:30 AM IST

ಸಾರಾಂಶ

ಯೋಗ್ಯವಲ್ಲದ ಜಮೀನು ಖರೀದಿಸಿ ಏಕ ಕಾಲದಲ್ಲಿ ಕೆರೆ ನಿರ್ಮಿಸಲು ಸಾಧ್ಯವಾಗದೆ ನೀರು ಸಂಗ್ರಹಣೆಗೆ ತೊಂದರೆ. ರೆ ನಿರ್ಮಾಣಕ್ಕೆ ಭೂಮಿ ಯೋಗ್ಯವಾಗಿದೆಯೇ, ಸಮತಟ್ಟಾಗಿದೆಯೇ ಎಂದು ಪರಿಶೀಲಿಸದೆ, ಮಣ್ಣಿನ ಪರೀಕ್ಷೆಯನ್ನು ಮಾಡಿಸದೆ ನಾಡಗೌಡ ಭೂಮಿ ಖರೀದಿ ಮಾಡಿದ್ದಾರೆ ಎಂದು ಶಾಸಕರ ಆರೋಪ.

ಕನ್ನಡಪ್ರಭ ವಾರ್ತೆ ಸಿಂಧನೂರು

ತುರ್ವಿಹಾಳ ಬಳಿ ಕೆರೆ ನಿರ್ಮಾಣಕ್ಕೆ ಯೋಗ್ಯವಲ್ಲದ 259 ಎಕರೆ ಜಮೀನನ್ನು ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಅವಧಿಯಲ್ಲಿ ಖರೀದಿ ಮಾಡಿರುವುದರಿಂದ ಕೆರೆಯನ್ನು ಏಕ ಕಾಲದಲ್ಲಿ ನಿರ್ಮಿಸಲು ಸಾಧ್ಯವಾಗದೆ ಹೋಯಿತು. ಹೀಗಾಗಿ ನೀರು ಸಂಗ್ರಹಣೆಗೆ ತೊಂದರೆಯಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.

ಈ ಕುರಿತು ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆರೆ ನಿರ್ಮಾಣಕ್ಕೆ ಭೂಮಿ ಯೋಗ್ಯವಾಗಿದೆಯೇ, ಸಮತಟ್ಟಾಗಿದೆಯೇ ಎಂದು ಪರಿಶೀಲಿಸದೆ, ಮಣ್ಣಿನ ಪರೀಕ್ಷೆಯನ್ನು ಮಾಡಿಸದೆ ನಾಡಗೌಡ ಭೂಮಿ ಖರೀದಿ ಮಾಡಿದ್ದಾರೆ. ಒಂದು ಕಡೆ ಗುಡ್ಡವಿದೆ, ಇನ್ನೊಂದೆಡೆ ಇಳಿಜಾರು ಭೂಮಿಯಿದ್ದು, ತಳಪಾಯ ಸರಿಯಾಗಿಲ್ಲ. ಭೂಮಿಯು ಅಧಿಕ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತಿದೆ. ಆದ್ದರಿಂದಲೇ ತಾವು ಶಾಸಕರಾದ ನಂತರ ಜಿಲ್ಲಾಧಿಕಾರಿ, ಎಂಜನಿಯರ್‌ಗಳ ಸಭೆ ನಡೆಸಿ, ತೇವಾಂಶ ಜಾಸ್ತಿಯಾಗಿ ಕೆರೆಯ ಬಂಡೆ ಹೊಡೆಯುವ ಸಾಧ್ಯತೆ ಇರುವುದರಿಂದ ಎರಡು ಹಂತದಲ್ಲಿ ಕೆರೆ ನಿರ್ಮಿಸಬೇಕೆಂಬ ತೀರ್ಮಾನ ಕೈಗೊಂಡು ಮೊದಲನೇ ಹಂತದಲ್ಲಿ 110 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೆ.ವಿರೂಪಾಕ್ಷಪ್ಪ, ನಾಡಗೌಡ ಹಾಗೂ ನಾನು ಶಾಸಕರಾಗಿದ್ದಾಗಲೂ ಸಹ ರಾಯಚೂರಿನ ಬಂಗಾರಪ್ಪ ಕೆರೆ ತುಂಬಿಸಿದ ನಂತರವೆ ಸಿಂಧನೂರು ಕೆರೆಯನ್ನು ತುಂಬಿಸಲಾಗಿದೆ. ಈ ಬಾರಿ 450 ಎಚ್ಪಿ 3 ಮೋಟರ್ ಕೂರಿಸಿ 8 ದಿನಗಳ ಕಾಲ ತುರ್ವಿಹಾಳ ಕೆರೆಗೆ ನೀರು ಹರಿಸಲಾಗಿದೆ. ನಗರಸಭೆ, ಗ್ರಾಮ ಪಂಚಾಯಿತಿ ಪಿಡಿಒಗಳ ಜೊತೆಗೆ ಹಲವು ಬಾರಿ ಸಭೆ ನಡೆಸಿ, 6 ತಿಂಗಳುಗಳ ಕಾಲ ನಿರ್ವಹಣೆ ಮಾಡಿ ನೀರು ಹರಿಸಲಾಗಿದೆ. ಮಳೆರಾಯನ ಕೊರತೆಯಿಂದ ನೀರಿನ ಸಮಸ್ಯೆ ಉದ್ಬವಿಸಿದೆ ಎಂದು ತಿಳಿಸಿದರು.

ನಾನು ಶಾಸಕನಾದ ನಂತರ ಸರ್ಕಾರದಿಂದ ರು.99 ಕೋಟಿ ಅನುದಾನ ತಂದು 110 ಎಕರೆಯಲ್ಲಿ ಕೆರೆ ನಿರ್ಮಿಸಿ, ಸಿಂಧನೂರಿನ ದೊಡ್ಡ ಕೆರೆಯವರೆಗೆ ರೈಸಿಂಗ್ ಪೈಪ್ಲೈನ್ ಹಾಕಿಸಿ, ಫಿಲ್ಟರ್ ಅಳವಡಿಸಿ, 5 ಓಎಚ್ಟಿ ಜೋಡಿಸಿ, ಮನೆ ಮನೆಗೆ ಹೊಸ ನಳಗಳ ಪೈಪ್ಲೈನ್ ಹಾಕಿಸಿ ನೀರು ಪೂರೈಸಲಾಗಿದೆ ಎಂದರು.

ಸಿಂಗಟಾಲೂರು ಡ್ಯಾಂನಿಂದ 1 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಹರಿಸಲು ಸರ್ಕಾರ ಆದೇಶಿಸಿದ್ದು, ಈಗಾಗಲೇ 3 ಸಾವಿರ ಕ್ಯೂಸೆಕ್ಸ್ನಂತೆ ನೀರು ಹರಿಸಲಾಗಿದೆ. ಅದನ್ನು 5 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 1570 ಅಡಿ ನೀರು ಸಂಗ್ರಹವಿದ್ದು, ಡ್ಯಾಂನಿಂದ ಎಡದಂಡೆ ನಾಲೆಗೆ ನೀರು ಹರಿಸಬೇಕಾದರೆ 1583 ಅಡಿ ನೀರು ಸಂಗ್ರಹವಿರಬೇಕು. ಈ ಎಲ್ಲ ವಿಚಾರ ಗೊತ್ತಿದ್ದರೂ ಸಹ ನಾಡಗೌಡ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಅವರ ಘನತೆಗೆ ಶೋಭೆಯಲ್ಲ. ನಾಡಗೌಡರು ನನ್ನ ಜೊತೆ ಬರಲಿ ಡ್ಯಾಂ ಶೆಲ್ಟರ್ ಎತ್ತಿಸುತ್ತೇನೆ, ನೀರು ಬರುತ್ತದೆಯಾ ಅಂತ ನೋಡೋಣ ಎಂದು ಸವಾಲೆಸೆದರು.

ತುರ್ವಿಹಾಳ ಕೆರೆ ನಿರ್ಮಾಣ ಕಾಮಗಾರಿ ಇನ್ನೂ ಬಾಕಿಯಿದೆ. ಗುತ್ತಿಗೆದಾರರಿಗೆ ರು.9 ಕೋಟಿ ಹಣ ಪಾವತಿಸುವುದು ಬಾಕಿಯಿದೆ. ಗುತ್ತಿಗೆ ಕಂಪನಿಯನ್ನು ಟರ್ಮಿನೆಂಟ್ ಮಾಡಲು ಪತ್ರ ಬರೆಯಲಾಗಿದೆ. ಆದರೆ ಗುತ್ತಿಗೆದಾರ ಕಲ್ಕತ್ತಾ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ರು.30 ಕೋಟಿ ಹಾಗೂ ರು.120 ಕೋಟಿ ವೆಚ್ಚದ ಎರಡು ಡಿಪಿಆರ್ ತಯಾರಿಸಲಾಗಿದೆ. ಸರ್ಕಾರ ಒಪ್ಪಿಗೆ ಕೊಟ್ಟರೆ ಟೆಂಡರ್ ಕರೆದು ಕೆರೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕ್ರೀಡಾಂಗಣ ಕಾಮಗಾರಿ ಅರ್ಧವಾಗಿದ್ದು, ತೀರಾ ಕಳಪೆಯಿಂದ ಕೂಡಿದೆ. ಇನ್ನೂ ರು.1 ಕೋಟಿ ಹಣ ಉಳಿದಿದ್ದು, ಗುಣಮಟ್ಟದ ಕೆಲಸವನ್ನು ಆದಷ್ಟು ಶೀಘ್ರ ಆರಂಭಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಕಾಂಗ್ರೆಸ್ ಮುಖಂಡ ಎನ್.ಅಮರೇಶ ಇದ್ದರು.