ವೇಣೂರಿನ ಎಸ್.ಡಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೀಕೃತ ಅತ್ಯಾಧುನಿಕ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಾಗಾರ ಕೇಂದ್ರ

ಬೆಳ್ತಂಗಡಿ: ಕನಸುಗಳಿಲ್ಲದ ಬದುಕು ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತದೆ. ವಿದ್ಯಾರ್ಥಿಗಳು ದೃಢವಾದ ಪ್ರಯತ್ನ ಮತ್ತು ದೊಡ್ಡ ಕನಸುಗಳೊಂದಿಗೆ ಬದುಕಿನಲ್ಲಿ ಮುಂದೆ ಸಾಗಬೇಕು ಎಂದು ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ದೇವ್ ದಾಸ್ ಶೆಟ್ಟಿ ಹೇಳಿದರು.

ಅವರು ವೇಣೂರಿನ ಎಸ್.ಡಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೀಕೃತ ಅತ್ಯಾಧುನಿಕ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಾಗಾರ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾದ ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಯುತ ಶಿಕ್ಷಣದೊಂದಿಗೆ ಸ್ಪಷ್ಟ ಗುರಿ ಹೊಂದಿದರೆ ಉದ್ದಿಮೆ ಕ್ಷೇತ್ರದಲ್ಲಿ ಉದ್ಯೋಗದಾತರಾಗಿ ಬೆಳೆೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಹಕಾರ ಮಹತ್ವದ್ದಾಗಿದೆ ಎಂದರು.

ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, 30 ವಿದ್ಯಾರ್ಥಿಗಳಿಂದ ಆರಂಭವಾದ ವೇಣೂರಿನ ಐಟಿಐ ಇಂದು 300 ವಿದ್ಯಾರ್ಥಿಗಳ ಮಟ್ಟಿಗೆ ಬೆಳೆದಿದ್ದು, ಪ್ರತಿ ವರ್ಷ ಶೇ.100 ದಾಖಲಾತಿ ಮತ್ತು ಶೇ.100 ಪ್ಲೇಸ್‌ಮೆಂಟ್ ಸಾಧಿಸುತ್ತಿದೆ ಎಂದರು.

ಟೊಯೋಟಾ, ಸ್ನೇಯ್ಡರ್ ಎಲೆಕ್ಟ್ರಿಕ್, ಬೋಶ್ ಸೇರಿದಂತೆ ಆರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ. ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆ ಸಿಎಸ್ಆರ್ ಅಡಿಯಲ್ಲಿ ಸುಮಾರು ₹22 ಲಕ್ಷ ಮೌಲ್ಯದ ವಿದ್ಯುತ್ ಉಪಕರಣಗಳನ್ನು ಕಾರ್ಯಾಗಾರ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿರುವುದು ವಿದ್ಯಾರ್ಥಿಗಳ ತರಬೇತಿಗೆ ಬಹಳ ಉಪಯುಕ್ತವಾಗಲಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ದೇವ್ ದಾಸ್ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿಯವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಟೂಲ್ ಕಿಟ್ ವಿತರಣೆ:

ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯ ವತಿಯಿಂದ ಸುಮಾರು 50 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ರೋಹಿತ್, ಪ್ರದೀಪ್, ಕಾರ್ತಿಕ್ ರಾಜ್, ಧನುಶ್, ಸೂರಜ್ ಕಿಣಿ ಹಾಗೂ ಚೈತ್ರೇಶ್ ಸೇರಿದಂತೆ ಆರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.

ವಿದ್ಯಾರ್ಥಿನಿಯರಾದ ಪ್ರಭಾ ಮತ್ತು ಪೂಜಾ ಪ್ರಾರ್ಥಿಸಿದರು. ಪದ್ಮ ಪ್ರಸಾದ್ ಬಿ. ಕಾರ್ಯಕ್ರಮ ನಿರೂಪಿಸಿ, ರಾಮಚಂದ್ರ ಶೆಟ್ಟಿ ವಂದಿಸಿದರು.

ಎಸ್.ಡಿ.ಎಂ ಐಟಿಐ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ವಿಶೇಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಂಸ್ಥೆ ಘೋಷಿಸಿತು.

ಕೈಗಾರಿಕಾ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ 21 ದಿನಗಳ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರತಿನಿಧಿಗಳು ಭರವಸೆ ನೀಡಿದರು.