ಶಾಸಕರ ಬೆಂಬಲಿಗರು ವಿನಾಕಾರಣ ಸ್ವಯಂ ಪ್ರೇರಿತ ಬಂದ್ ಹೆಸರಲ್ಲಿ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುವ ಮೂಲಕ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅದರಂತೆ ನಮ್ಮ ವ್ಯಾಪಾರಕ್ಕೂ ತೊಂದರೆ ಉಂಟು ಮಾಡಲು ಬಂದಿದ್ದಾರೆ, ಇದೇನಾ ಸ್ವಯಂ ಪ್ರೇರಿತ ಬಂದ್ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗುವ ಭಾಗ್ಯ ಸಿಕ್ಕಿಲ್ಲವೆಂದು ಗುರುವಾರ ಬಂಗಾರಪೇಟೆ ಬಂದ್ ಆಚರಿಸುವ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಾಸಕರ ಬೆಂಬಲಿಗರು ಬಸ್ ನಿಲ್ದಾಣದ ಬಳಿಯಿರುವ ಬಿಜೆಪಿ ಮುಖಂಡರಿಗೆ ಸೇರಿದ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಲ್ಲಿ ರಸ್ತೆ ತಡೆಯಲು ಯತ್ನಿಸಿದಾಗ ಇದಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ವಿರೋಧ ವ್ಯಕ್ತಪಡಿಸಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕರ ಬೆಂಬಲಿಗರು ವಿನಾಕಾರಣ ಸ್ವಯಂ ಪ್ರೇರಿತ ಬಂದ್ ಹೆಸರಲ್ಲಿ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುವ ಮೂಲಕ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅದರಂತೆ ನಮ್ಮ ವ್ಯಾಪಾರಕ್ಕೂ ತೊಂದರೆ ಉಂಟು ಮಾಡಲು ಬಂದಿದ್ದಾರೆ, ಇದೇನಾ ಸ್ವಯಂ ಪ್ರೇರಿತ ಬಂದ್ ಎಂದು ಪ್ರಶ್ನಿಸಿದರು.

ಆಗ ಪ್ರತಿಭನಾಕಾರರು, ನಾವು ನಿಮ್ಮ ಬಂಕ್ ವ್ಯಾಪಾರಕ್ಕೆ ತೊಂದರೆ ಮಾಡಿಲ್ಲ, ಬದಲಾಗಿ ನಾವು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಅದು ಅಲ್ಲದೇ ರಾಜಕಾಲುವೆ ಮೇಲೆ ಮಾಡಿದರೆ ನಿಮಗೇನು ತೊಂದರೆ ಎಂದು ತಗಾದೆ ತೆಗೆದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ತಾರಕ್ಕೇರಿತು, ಪೊಲೀಸರು ಮಧ್ಯಪ್ರವೇಶ ಮಾಡಿ ವಾತಾವರಣವನ್ನು ತಿಳಿಗೊಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಸ್ವಯಂ ಪ್ರೇರಿತ ಬಂದ್ ಮಾಡುವವರು ಯಾರೂ ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುವುದಿಲ್ಲ, ರಸ್ತೆ ತಡೆ ಮಾಡಲ್ಲ, ಆದರೆ ಕಾಂಗ್ರೆಸ್ ಗೂಂಡಾಗಳು ದೌರ್ಜನ್ಯದಿಂದ ಜನರಿಗೆ ತೊಂದರೆ ಉಂಟು ಮಾಡಿ ಬಂದ್ ಮಾಡಿದ್ದಾರೆ, ಶಾಸಕರಿಗೆ ಅನ್ಯಾಯವಾಗಿದ್ದರೆ ಮುಖ್ಯಮಂತ್ರಿಗಳನ್ನು ಕೇಳಲಿ, ಅದು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಯಾಕೆ ಕೊಡಬೇಕು, ದೌರ್ಜನ್ಯದಿಂದ ಬಂದ್ ಮಾಡಿದರೆ ಬಿಜೆಪಿ ಸುಮ್ಮನೆ ಕೂರಲ್ಲ, ನಾವು ಸಾರ್ವಜನಿಕರ ಪರ ನಿಂತು ಧ್ವನಿ ಎತ್ತುವೆವು ಎಂದು ಆಕ್ರೋಶ ವ್ಯಕ್ತಪಡಿಸಿದರು.