ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಾನೊಬ್ಬ ರೈತನ ಮಗನಾಗಿದ್ದು, ರೈತರ ಕಷ್ಟವನ್ನು ಅರಿತಿರುವುದರಿಂದ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ವಿತರಿಸಲು ಕ್ರಮವಹಿಸಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.ತಾಲೂಕಿನ ಕೈಲಾಂಚ ಹೋಬಳಿ ಕೆ.ಜಿ.ಹೊಸಹಳ್ಳಿ ಗ್ರಾಮದ ಬಗರ್ ಹುಕುಂ ಸಾಗುವಳಿ ಅರ್ಜಿದಾರರ ರೈತರ ಭೂಮಿಗಳಿಗೆ ತೆರಳಿ ತಹಸೀಲ್ದಾರ್ ಮತ್ತು ಮತ್ತಿತರ ಅಧಿಕಾರಿಗಳು, ಮುಖಂಡರೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆ ಬೇರೆ ಕ್ಷೇತ್ರಗಳನ್ನು ಗಮನಿಸಿದ್ದು, ಅಲ್ಲಿ ರೈತರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಅರ್ಜಿ ವಿಲೇವಾರಿ ಕೆಲಸ ಇದುವರೆಗೂ ಆಗಿಲ್ಲ. ಗ್ರಾಮೀಣ ಭಾಗದ ಜನರ ಕಷ್ಟ- ಸುಖ ಕೇಳಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ರೈತರ ಅರ್ಜಿ ವಿಲೇವಾರಿಗಾಗಿ ಈಗಾಗಲೇ ಐದಾರು ಸಭೆಗಳನ್ನು ತಹಸೀಲ್ದಾರ್ ಮತ್ತು ಅಧಿಕಾರಿಗಳೊಂದಿಗೆ ನಡೆಸಿದ್ದೇನೆ. ಈ ಹಿಂದೆ ಶಾಸಕರಾಗಿ ಆಯ್ಕೆಯಾದವರು ಸಭೆಗಳನ್ನು ನಡೆಸದ ಪರಿಣಾಮ ಅರ್ಜಿಗಳು ಧೂಳು ಹಿಡಿದಿವೆ. ಹಾಗಾಗಿ ನಾನು ಬಗರ್ ಹುಕುಂ ಸಮಿತಿ ರಚಿಸಿ ಸಭೆಗಳನ್ನು ಮಾಡಿದ್ದು, ಇದರಿಂದ ರೈತರ ಅರ್ಜಿಗಳಿಗೆ ಮುಕ್ತಿ ನೀಡಿ ಸಾಗುವಳಿ ಚೀಟಿ ನೀಡುವ ಕೆಲಸಕ್ಕೆ ವೇಗ ನೀಡಿದ್ದೇನೆ ಎಂದರು.ಈ ಹಿಂದೆ ಕೊಟ್ಟ ಮಾತಿನಂತೆ ಕೈಲಾಂಚ ಹೋಬಳಿಯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ, ಅಣ್ಣಹಳ್ಳಿ, ಬೆಣ್ಣಹಳ್ಳಿ ಕೆರೆ ತುಂಬಿಸಲಾಗುತ್ತಿದೆ. ತೆಂಗಿನಕಲ್ಲು, ಅವ್ವೆರಹಳ್ಳಿ ಕೆರೆ ತುಂಬಿಸಲು ಟ್ರಯಲ್ ನಡೆದಿದೆ. ಕಸಬಾ ಹೋಬಳಿ ಕಾಳೇಗೌಡನದೊಡ್ಡಿ ಗ್ರಾಮದ ಬಳಿ 28 ಕೋಟಿ ರು. ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ನನ್ನ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಾದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ನಾನು ಮುಡಾ, ಕೇಂದ್ರಮಂತ್ರಿ, ಸಿಎಂ ರಾಜೀನಾಮೆ ವಿಷಯಗಳ ರಾಜಕಾರಣ ಬಿಟ್ಟು, ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜನೀತಿಯ ರಾಜಕಾರಣ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ತಹಸೀಲ್ದಾರ್ ತೇಜಸ್ವಿನಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಬಗರ್ ಹುಕುಂ ಸಮಿತಿ ಸದಸ್ಯ ಆರ್.ದೊಡ್ಡವೀರಯ್ಯ, ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್, ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ತಾಪಂ ಮಾಜಿ ಸದಸ್ಯ ರೇಣುಕಪ್ಪ ಮುಖಂಡರಾದ ಕೆಂಪರಾಮು, ಪಾರ್ಥಣ್ಣ, ಅನಿಲ್ ಜೋಗಿಂದರ್ , ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))