ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು

| Published : Feb 17 2024, 01:15 AM IST

ಸಾರಾಂಶ

ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಜನನಾಯಕ ಲಕ್ಷ್ಮಣ ಸವದಿ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ

ಕನ್ನಡಪ್ರಭ ವಾರ್ತೆ ಅಥಣಿ

ರಕ್ತದಾನ ಮಹಾದಾನವಾಗಿದೆ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದೆ. ರಕ್ತದಾನ ಮಾಡುವ ಮೂಲಕ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಡಾ. ಬಸಗೌಡ ಕಾಗೆ ಹೇಳಿದರು.

ಪಟ್ಟಣದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ನೌಕರರ ಸಂಘ, ತಾಲೂಕು ಆರೋಗ್ಯ ಇಲಾಖೆ, ಎಸ್‌ಎಸ್ಎಂಎಸ್ ಮಹಾವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಜನನಾಯಕ ಲಕ್ಷ್ಮಣ ಸವದಿ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಅಥಣಿ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಎಸ್.ಆರ್‌, ಗೂಳಪ್ಪನವರ, ಪ್ರದೀಪ ನಂದಗಾವ ಸೇರಿದಂತೆ ಇನ್ನಿತರರು ಇದ್ದರು.

ಕೋಟ್..

ಸಮಾಜದಲ್ಲಿ ಅನೇಕ ಬಗೆಯ ದಾನಗಳನ್ನು ನೋಡುತ್ತೇವೆ. ಯಾರಿಗೆ ಯಾವುದು ಅವಶ್ಯಕತೆ ಇರುತ್ತದೆ, ಅದನ್ನು ದಾನವಾಗಿ ನೀಡಿದರೆ ಅದೊಂದು ಮಹಾದಾನ ಎನಿಸಿಕೊಳ್ಳುತ್ತದೆ. ಅಪಘಾತ ಇಲ್ಲವೇ ಅನೇಕ ಬಗೆಯ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಒಂದು ಜೀವ ಉಳಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಅನೇಕ ಜನ ನನ್ನ ಅಭಿಮಾನಿಗಳು ಮತ್ತು ಸರ್ಕಾರಿ ನೌಕರರು ರಕ್ತದಾನ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು.

ಲಕ್ಷ್ಮಣ ಸವದಿ. ಮಾಜಿ ಡಿಸಿಎಂ, ಹಾಲಿ ಶಾಸಕ