ಹಿರಿಯ ಪತ್ರಕರ್ತ ಮದನ ಮೋಹನ ನಿಧನ

| Published : Jun 16 2024, 01:49 AM IST

ಸಾರಾಂಶ

ಪತ್ರಕರ್ತರೆಂದರೆ ಹೇಗಿರಬೇಕು. ಅಧ್ಯಯನಶೀಲತೆ ಯಾವ ರೀತಿ ಇರಬೇಕು. ಕಾಯಕನಿಷ್ಠೆ ಹೇಗಿರಬೇಕು ಎಂಬುದಕ್ಕೆ ಬರೋಬ್ಬರಿ 47 ವರ್ಷಗಳ ಕಾಲ ಪತ್ರಕರ್ತರಾಗಿದ್ದ ಮತ್ತಿಹಳ್ಳಿ ಮದನ ಮೋಹನ ಉತ್ತಮ ಉದಾಹರಣೆ.

ಹುಬ್ಬಳ್ಳಿ:

ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ (83) ಅವರು ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು- ಬಳಗವಿದೆ. ಶನಿವಾರ ಅಂತ್ಯಕ್ರಿಯೆ‌ ನಡೆಯಿತು.‌

ದಿ ಹಿಂದು ಪತ್ರಿಕೆಯಲ್ಲಿ 47 ವರ್ಷ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ಬಳಿಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ನಿವೃತ್ತರಾದ ಬಳಿಕ ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ತೋರಿದ್ದ ಅವರು, ಶಾಸ್ತ್ರ ಅಧ್ಯಯನ ಮಾಡುತ್ತಿದ್ದರು. ಜಪ ತಪ ಮತ್ತು ಅನುಷ್ಠಾನ ನಿರತರಾಗಿದ್ದರು.

ಮೂಲತಃ ಬಳ್ಳಾರಿಯ ಮದನ ಮೋಹನ ಅವರು, 1958ರಲ್ಲಿ ಹುಬ್ಬಳ್ಳಿಗೆ ಬಂದರು. ಬೆಳಗಾವಿ, ಗೋವಾದಲ್ಲಿ ಕೆಲಸ ಮಾಡಿದ ನಂತರ 1968ರಲ್ಲಿ ಮತ್ತೆ ಹುಬ್ಬಳ್ಳಿಗೆ ಬಂದು ಉತ್ತರ ಕರ್ನಾಟದ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿ 2005ರಲ್ಲಿ ನಿವೃತ್ತರಾದರು. ಅವರ ತಂದೆ ರಾಘವೇಂದ್ರರಾವ್ ದಿ ಹಿಂದು ಪತ್ರಿಕೆಯ ಬಳ್ಳಾರಿ ವರದಿಗಾರರಾಗಿದ್ದರು. ಮದನ ಮೋಹನ ಅವರ ಪುತ್ರ ಮತ್ತಿಹಳ್ಳಿ ರಾಘವ ಕೂಡ ದಿ ಹಿಂದು ಪತ್ರಿಕೆಯ ಪತ್ರಕರ್ತರಾಗಿದ್ದಾರೆ.

ಇಂಗ್ಲಿಷ್ ಭಾಷಾ ಪತ್ರಕರ್ತರಾದರೂ ಕನ್ನಡದಲ್ಲೂ ಬರೆಯುತ್ತಿದ್ದರು ಎಂಬುದು ಅವರ ವಿಶೇಷತೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಅಧಿಕಾರ ವೀಕೇಂದ್ರಿಕರಣ, ಜಲಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಅವರ ಆಯ್ಕೆಯ ವಿಷಯಗಳಾಗಿದ್ದವು. ವಸ್ತುನಿಷ್ಠ ವರದಿಗಾರಿಕೆಗೆ ಹೆಸರಾಗಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು.

ಕಾಯಕನಿಷ್ಠೆಗೆ ಮದನಮೋಹನ ಉತ್ತಮ ನಿದರ್ಶನ:

ಪತ್ರಕರ್ತರೆಂದರೆ ಹೇಗಿರಬೇಕು. ಅಧ್ಯಯನಶೀಲತೆ ಯಾವ ರೀತಿ ಇರಬೇಕು. ಕಾಯಕನಿಷ್ಠೆ ಹೇಗಿರಬೇಕು ಎಂಬುದಕ್ಕೆ ಬರೋಬ್ಬರಿ 47 ವರ್ಷಗಳ ಕಾಲ ಪತ್ರಕರ್ತರಾಗಿದ್ದ ಮತ್ತಿಹಳ್ಳಿ ಮದನ ಮೋಹನ ಉತ್ತಮ ಉದಾಹರಣೆ.ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಪತ್ರಕರ್ತರೆಂದೇ ಹೆಸರು ಪಡೆದವರು ಎಂ. ಮದನಮೋಹನ. ಇನ್ನು ನೆನಪು ಮಾತ್ರ.ಮೂಲತಃ ಬಳ್ಳಾರಿಯ ಮತ್ತಿಹಳ್ಳಿ ಮದನ ಮೋಹನ ಅವರು ಉತ್ತರ ಕರ್ನಾಟಕದ ಮಾಹಿತಿ ಕಣಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಅಧಿಕಾರ ವಿಕೇಂದ್ರಿಕರಣ, ಜಲಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಅವರ ಆಸಕ್ತಿ ವಿಷಯಗಳಾಗಿದ್ದವು.

ವಸ್ತುನಿಷ್ಠ ವರದಿಗಾರಿಕೆಗೆ ಹೆಸರಾಗಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು. ಕರ್ನಾಟಕ ಮಹಾರಾಷ್ಟ್ರ ಗಡಿ ತಂಟೆಯ 1986ರ ಗಲಭೆಗಳಲ್ಲಿ, ಹುಬ್ಬಳ್ಳಿಯ ಈದ್ಗಾ ಗಲಭೆಗಳ ಸಂದರ್ಭದಲ್ಲಿ ಅವರ ವರದಿಗಳು ಸರ್ಕಾರಗಳ ಎದುರು ವಾಸ್ತವಾಂಶವನ್ನು ತೆರೆದಟ್ಟಿದ್ದವು.ರಾಜ್ಯದಲ್ಲಿ ಅಧಿಕಾರದಲ್ಲಿದ್ದ ರಾಜಕಾರಣಿಗಳು ಅವರ ಜತೆ ಮಾತನಾಡಬೇಕೆಂದರೆ ಒಂದು ಕ್ಷಣ ವಿಚಾರ ಮಾಡಿ ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೇ ವಿಷಯದ ಆಳ ಗೊತ್ತಿಲ್ಲದೇ ಮಾತನಾಡುವ ನಾಯಕರಿಗಂತೂ ಬೆವರಿಳಿಸಿಬಿಡುತ್ತಿದ್ದರು. ಹೀಗಾಗಿ ಬಹುತೇಕ ದೊಡ್ಡ ನಾಯಕರು ಉತ್ತರ ಕರ್ನಾಟಕಕ್ಕೆ ಬರುವಾಗ ತಾವು ಹೇಳುವ ವಿಷಯದ ಬಗ್ಗೆ ಸ್ಪಷ್ಟತೆ ಇದ್ದರೆ ಮಾತ್ರ ಮಾತನಾಡುತ್ತಿದ್ದರು. ಇಲ್ಲವಾದರೆ, ಪತ್ರಿಕಾಗೋಷ್ಠಿಯನ್ನೇ ನಡೆಸುತ್ತಿರಲಿಲ್ಲ.

ಆಂಗ್ಲ ಭಾಷಾ ಪತ್ರಕರ್ತರಾಗಿ ಅಷ್ಟೊಂದು ಸುಧೀರ್ಘ ಕಾಲ ವರದಿಗಾರರಾಗಿದ್ದರೂ ಕನ್ನಡ ಭಾಷೆ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದರು. ನಿವೃತ್ತಿ ನಂತರ ಅವರು ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿರುವುದೇ ಸಾಕ್ಷಿ.ಸಂಘಕ್ಕೂ ಸೇವೆ;

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 1976ರಲ್ಲಿ ಸ್ಥಾಪನೆಗೊಂಡ ಸಮಯದಲ್ಲಿ ಸಂಘದ ಪ್ರಪ್ರಥಮ ಖಜಾಂಚಿಗಳಾಗಿ ಕಾರ್ಯ ನಿರ್ವಹಿಸಿದ್ದರು. 1979ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧಿವೇಶನ ಯಶಸ್ವಿಯಾಗುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಆ ಸಮ್ಮೇಳನವನ್ನು ಅಂದಿನ ಕೇಂದ್ರ ಸರ್ಕಾರದ ವಾರ್ತಾ ಸಚಿವರಾಗಿದ್ದ ಲಾಲಕೃಷ್ಣ ಅಡ್ವಾಣಿ ಉದ್ಘಾಟನೆ ಮಾಡಿದ್ದರು.ಪತ್ರಕರ್ತರ ಕುಟುಂಬ:

ಇವರದು ಪತ್ರಕರ್ತರ ಕುಟುಂಬ. ಮದನ ಮೋಹನ ಅವರ ತಂದೆ ರಾಘವೇಂದ್ರರಾವ್ ದಿ ಹಿಂದು ಪತ್ರಿಕೆಯ ಬಳ್ಳಾರಿ ವರದಿಗಾರರಾಗಿದ್ದರು. ಮದನ ಮೋಹನ ಅವರ ಪುತ್ರ ಮತ್ತಿಹಳ್ಳಿ ರಾಘವ ಕೂಡ ಮಂಗಳೂರಿನಲ್ಲಿ ದಿ ಹಿಂದು ಪತ್ರಿಕೆ ವರದಿಗಾರರಾಗಿದ್ದಾರೆ. ಮದನಮೋಹನ ಅವರ ಸಹೋದರ, ಅವರ ಪುತ್ರ ಹೀಗೆ ಕುಟುಂಬದ ಬಹುತೇಕರು ಪತ್ರಿಕೋದ್ಯಮದಲ್ಲೇ ತೊಡಗಿದ್ದು ವಿಶೇಷ.