ಪಶುಗಳ ಆರೋಗ್ಯ ರಕ್ಷಣೆ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಶುವೈದ್ಯರು ಆಧುನಿಕ ತಂತ್ರಜ್ಞಾನ, ಸುಧಾರಿತ ರೋಗ ಪತ್ತೆ ವಿಧಾನ ಮತ್ತು ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್ ಕುಮಾರ್ ಹೇಳಿದರು.

ಹಾವೇರಿ: ಪಶುಗಳ ಆರೋಗ್ಯ ರಕ್ಷಣೆ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಶುವೈದ್ಯರು ಆಧುನಿಕ ತಂತ್ರಜ್ಞಾನ, ಸುಧಾರಿತ ರೋಗ ಪತ್ತೆ ವಿಧಾನ ಮತ್ತು ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್ ಕುಮಾರ್ ಹೇಳಿದರು.

ನಗರದಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪಶುವೈದ್ಯರ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪಶುವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳು ಅಭಿವೃದ್ಧಿಯಾಗುತ್ತಿವೆ. ಪಶುವೈದ್ಯರು ಈ ಬೆಳವಣಿಗೆಗಳಿಗೆ ತಕ್ಕಂತೆ ತಮ್ಮ ವೃತ್ತಿಪರ ಜ್ಞಾನ ಹಾಗೂ ಕೌಶಲ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕು. ಇದರಿಂದ ಪಶುಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವುದರ ಜತೆಗೆ ಪಶುಸಂಗೋಪನೆ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್.ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ. ನಾಗರಾಜ್ ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ರೋಗ ಪತ್ತೆ ತಂತ್ರಜ್ಞಾನ ಹಾಗೂ ಕ್ಷೇತ್ರಮಟ್ಟದ ಅನುಭವಗಳ ಕುರಿತು ತಜ್ಞರು ಚರ್ಚಿಸಿದರು. ಜಿಲ್ಲೆಯ ಪಶುವೈದ್ಯರು ತಮ್ಮ ವೃತ್ತಿಪರ ಅನುಭವ ಮತ್ತು ಜ್ಞಾನ ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮ ವೇದಿಕೆಯಾಯಿತು.

ನಿವೃತ್ತ ನಿರ್ದೇಶಕರಾದ ಡಾ. ಮಂಜುನಾಥ ಪಾಳೇಗಾರ್, ಡಾ. ಜಯಣ್ಣ ಎಚ್.ಸಿ., ಡಾ. ಶಿವಯೋಗಿ ಯಾಳಿ, ಡಾ. ಜಯಕುಮಾರ್ ಕನಕನವಾಡಿ, ಡಾ. ಸುರೇಶ ಅಂಗಡಿ, ಹಾವೇರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್, ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಪರಮೇಶ ಹುಬ್ಬಳ್ಳಿ, ಪದಾಧಿಕಾರಿಗಳಾದ ಡಾ. ಪವನ್ ಬೆಳಕೇರಿ, ಡಾ. ಉಮೇಶ ಹೊನ್ನತ್ತಿ, ಡಾ. ಶಂಭು ಬಡ್ಡಿ ಸೇರಿದಂತೆ ಜಿಲ್ಲೆಯ ಪಶುವೈದ್ಯರು ಉಪಸ್ಥಿತರಿದ್ದರು.