ಪಶು ವೈದ್ಯಾಧಿಕಾರಿಗಳಿಗೆ ಕಂಪ್ಯೂಟರ್‌ ಜ್ಞಾನ ಅಗತ್ಯ: ಡಾ. ಮೋಹನ್‌ಕುಮಾರ್‌

| Published : Feb 15 2024, 01:15 AM IST

ಪಶು ವೈದ್ಯಾಧಿಕಾರಿಗಳಿಗೆ ಕಂಪ್ಯೂಟರ್‌ ಜ್ಞಾನ ಅಗತ್ಯ: ಡಾ. ಮೋಹನ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಪಶುಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಕಂಪ್ಯೂಟರ್‌ ಜ್ಞಾನ ಅರಿಯುವ ಸದಾಶಯ ಹೊಂದಿದಾಗ ಮಾತ್ರ ಉದ್ಯೋಗಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್‌ ಕರೆ ನೀಡಿದರು.

-ಚಿಕ್ಕಮಗಳೂರಿನಲ್ಲಿ ಪಶುಪಾಲನಾ ಇಲಾಖೆ ವೈದ್ಯರಿಗೆ ತಾಂತ್ರಿಕ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಪಶುಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಕಂಪ್ಯೂಟರ್‌ ಜ್ಞಾನ ಅರಿಯುವ ಸದಾಶಯ ಹೊಂದಿದಾಗ ಮಾತ್ರ ಉದ್ಯೋಗಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್‌ ಕರೆ ನೀಡಿದರು. ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಕಿರಿಯ ಪಶು ವೈದ್ಯಕೀಯ ಪರೀಕ್ಷಕರಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪಶುಗಳಿಗೆ ಬರುವ ಕಾಲುಬಾಯಿ ಜ್ವರ ಸೇರಿದಂತೆ ಇತರೆ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಸಮಗ್ರ ಮಾಹಿತಿ ನೀಡಲು ಈ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯ ವಿದ್ದು ಇದರ ಉದ್ದೇಶವೂ ಅದೇ ಆಗಿದೆ ಎಂದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಶು ವೈದ್ಯಾಧಿಕಾರಿಗಳಿಗೆ ಇರಬೇಕೆಂಬ ಕಾರಣಕ್ಕೆ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಪಶು ವೈದ್ಯರನ್ನು ಒಟ್ಟಿಗೆ ಸೇರಿಸಿ ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಶು ವೈದ್ಯರು ಪಡೆದುಕೊಂಡು ರೈತರಿಗೆ ನೆರವಾಗಬೇಕೆಂದು ತಿಳಿಸಿದರು. ಪಶು ವೈದ್ಯಕೀಯ ಇಲಾಖೆ ಉದ್ಯೋಗದಲ್ಲಿ ಒತ್ತಡ ಸಹಜ. ಆದರೆ, ಪಶುಗಳ ಆರೈಕೆ ಕುರಿತು ಸಂಬಂಧಿಸಿದ ಕಾಯಿಲೆ ಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಈ ಬದಲಾದ ಕಾಲಘಟ್ಟದಲ್ಲಿ ಡಾಟಾ ಎಂಟ್ರಿ ಮಾಡಬೇಕಾಗಿರುವುದರಿಂದ ಕಂಪ್ಯೂಟರ್‌ ಜ್ಞಾನಕ್ಕೆ ಹೊಂದಿಕೊಂಡು ಕೆಲಸ ಮಾಡಿದಾಗ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು. ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಕೇವಲ ಸಮಯ ಸೀಮಿತಗೊಳಿಸದೆ ಮುಂದಿನ ದಿನಗಳಲ್ಲಿ ಕೇಂದ್ರ ಸಂಘದ ಜನಪ್ರತಿನಿಧಿಗಳು ಆಯ್ಕೆಯಾಗಿ ಬರಲಿದ್ದಾರೆ. ಆದ್ದರಿಂದ ತಮ್ಮ ಮನಸ್ಥಿತಿ ಬದಲಿಸಿಕೊಂಡು ಉತ್ತಮ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು. ಪಶು ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಡಿ ಪದ್ಮೇಗೌಡ ಮಾತನಾಡಿ, ಇತ್ತೀಚೆಗೆ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಹಾಗೂ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ದಿನನಿತ್ಯ ಕೈಗೊಳ್ಳುವ ಸೇವೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲು ಭಾರತ್ ಪಶುಧನ್ ಎಂಬ ಆಪ್‌ನ್ನು ಬಿಡುಗಡೆ ಮಾಡಲಾಗಿದ್ದು, ಇದರ ಮೂಲಕ ಪಶುಪ್ರಾಣಿಗಳ ಸ್ವವಿವರಗಳನ್ನು ದಾಖಲಿಸಬಹುದಾಗಿದೆ ಎಂದರು. ಸಂಘದ ಉಪಾಧ್ಯಕ್ಷರಾದ ರಾಮಚಂದ್ರಗೌಡ, ನವೀನ್, ಕಾರ್ಯದರ್ಶಿ ಬಿ.ಎಂ ಪ್ರಕಾಶ್, ಖಜಾಂಚಿ ಜಯದೇವ ಮೂರ್ತಿ, ಕಂಠಿ, ಸೋಮಣ್ಣ ಉಪಸ್ಥಿತರಿದ್ದರು.

--ಬಾಕ್ಸ್‌--

ಪಶುಧನ್‌ ಆಪ್‌ನಲ್ಲಿ ಮಾಹಿತಿ ದಾಖಲು

ಭಾರತ್ ಪಶುಧನ್‌ ಆಪ್ ಬಿಡುಗಡೆ ಮಾಡಿರುವುದರಿಂದ ಪಶು ಆಸ್ಪತ್ರೆಗಳಲ್ಲಿ ಕೈಗೊಳ್ಳುವ ಚಿಕಿತ್ಸೆ, ಸೇವೆ, ಕಾರ್ಯಕ್ರಮಗಳನ್ನು ದಾಖಲು ಮಾಡಬೇಕಾಗಿದೆ ಎಂದು ಹಾಸನ ಜಿಲ್ಲೆ ಆಲೂರು ಪಶು ವೈದ್ಯಾಧಿಕಾರಿ ಡಾ. ಚಂದನ್ ಹೇಳಿದರು. ಜಾನುವಾರುಗಳಿಗೆ ಲಸಿಕೆ ನೀಡಿದ್ದನ್ನು ದೃಢಪಡಿಸಲು ಕಿವಿಗಳಿಗೆ ಓಲೆ ಅಳವಡಿಸಲಾಗುವುದು. ಈ ಕಿವಿ ಓಲೆಯಲ್ಲಿರುವ ನಂಬರ್‌ಗಳನ್ನು ಈ ಆಪ್‌ನಲ್ಲಿ ಎಂಟ್ರಿ ಮಾಡಿರಬೇಕು. ಮುಂದೆ ಈ ಕಿವಿ ಓಲೆ ನಂಬರ್‌ಗಳನ್ನು ಸ್ಕ್ಯಾನ್ ಮಾಡಿದಾಗ ಪಶು ಎಲ್ಲಿದೆ ಎಂಬ ಬಗ್ಗೆ ಹಾಗೂ ಎಷ್ಟು ಬಾರಿ ಚಿಕಿತ್ಸೆ ನೀಡಲಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು. 14 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ತಾಂತ್ರಿಕ ಕಾರ್ಯಾಗಾರವನ್ನು ಡಾ. ಮೋಹನ್‌ಕುಮಾರ್‌ ಉದ್ಘಾಟಿಸಿದರು.