ಜನವರಿ 22ಕ್ಕೆ ಅಯೋಧ್ಯೆ ಕಡೆಗೆ ಮುಖ ಮಾಡಿ ಆರತಿ ಬೆಳಗಲು ವಿಎಚ್‌ಪಿ ಕರೆ

| Published : Jan 17 2024, 01:48 AM IST

ಸಾರಾಂಶ

ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ನಿಮಿತ್ತ ಇದಕ್ಕಾಗಿ ಹೋರಾಡಿದ ಹುತಾತ್ಮರಿಗೆ ನಮನ ಸಲ್ಲಿಸಲು ಅಯೋಧ್ಯೆಯ ಕಡೆ ಮುಖ ಮಾಡಿ ಶ್ರೀರಾಮನಿಗೆ ಆರತಿ ಬೆಳಗಲು ವಿಶ್ವ ಹಿಂದೂ ಪರಿಷತ್‌ ಕರೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇದೇ 22ರಂದು ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಹೋರಾಡಿ ಹುತಾತ್ಮರಿಗೆ ನಮನ ಸಲ್ಲಿಸಲು ದೀಪಗಳನ್ನು ಬೆಳಗಿ, ಅಯೋಧ್ಯೆಯ ಕಡೆ ಮುಖ ಮಾಡಿ ಶ್ರೀರಾಮನಿಗೆ ಆರತಿಯನ್ನು ಬೆಳಗಿ ಮತ್ತೊಂದು ನವ ಇತಿಹಾಸ ನಿರ್ಮಿಸುವಂತೆ ವಿಶ್ವ ಹಿಂದೂ ಪರಿಷತ್‌ ಕರೆ ನೀಡಿದೆ.ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಸ್ಥಾನದಲ್ಲಿ, ಭವ್ಯ ಮಂದಿರವು ನಿರ್ಮಾಣ ಗೊಳ್ಳುತ್ತಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವನ್ನು ಭಾರತೀಯರೆಲ್ಲರೂ ಒಂದು ರಾಷ್ಟ್ರೀಯ ಉತ್ಸವವನ್ನಾಗಿ, ಹಬ್ಬವನ್ನಾಗಿ ಸಂತೋಷ, ಸಂಭ್ರಮ, ಸಡಗರ, ಉಲ್ಲಾಸಗಳಿಂದ ಆಚರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳತ್ತಿದ್ದಾರೆ. ಈಗಾಗಲೇ ಎಲ್ಲ ಮನೆಗಳಿಗೂ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರವನ್ನು ತಲುಪಿಸುವ ಕಾರ್ಯ ಅತ್ಯುತ್ಸಾಹದಿಂದ, ಭಕ್ತಿಯಿಂದ ನಡೆಯುತ್ತಿದೆ ಎಂದು ಪರಿಷತ್‌ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ತಿಳಿಸಿದ್ದಾರೆ. ಈ ಶುಭ ದಿನವು ಕೆಲಸದ ದಿನವಾಗಿರುವುದರಿಂದ, ಮಂದಿರಗಳಿಗೆ ತೆರಳಿ ವೀಕ್ಷಿಸಲು ಅನಾನುಕೂಲವಾಗಿರುವಂತಹ ಭಕ್ತಜನತೆಗೆ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲೇ ಸರಳವಾಗಿ ರಾಮನಿಗೆ ಪೂಜೆ ಮಾಡಬೇಕು. ಅಲ್ಲದೇ, ಅಯೋಧ್ಯೆಯ ನೇರಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಬಹು ನಿರೀಕ್ಷಿತ ಈ ಸುವರ್ಣ ಘಳಿಗೆಯ ವೀಕ್ಷಣೆಯ ಅವಕಾಶವನ್ನು ಉದ್ಯಮಪತಿಗಳ, ಸಂಘ ಸಂಸ್ಥೆಗಳ, ವ್ಯಾಪಾರ ಮಳಿಗೆಗಳ, ವ್ಯಾಪಾರಿಗಳ, ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರ್ಕಾರಿ ಕಚೇರಿಗಳ ಮುಖ್ಯಸ್ಥರು ಮಾಡಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.