ಉಗ್ರರ ದಾಳಿ ಖಂಡಿಸಿ ವಿಎಚ್‌ಪಿ ವತಿಯಿಂದ ಪಂಜಿನ ಮೆರವಣಿಗೆ

| Published : Apr 28 2025, 12:51 AM IST

ಉಗ್ರರ ದಾಳಿ ಖಂಡಿಸಿ ವಿಎಚ್‌ಪಿ ವತಿಯಿಂದ ಪಂಜಿನ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು-ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ವತಿಯಿಂದ ಚಿತ್ರದುರ್ಗದಲ್ಲಿ ಪಂಚಿನ ಮೆರವಣಿಗೆ ನಡೆಸಲಾಯಿತು.

ಗಾಂಧಿ ವೃತ್ತದಲ್ಲಿ ಮೃತರಿಗೆ ಶ್ರದ್ಧಾಂಜಲಿ । ಉಗ್ರರ ಪ್ರತಿಕೃತಿ ದಹನ, ಪಾಕ್ ದ್ವಜಕ್ಕೆ ಬೆಂಕಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಆನೆ ಬಾಗಿಲಿನಿಂದ ಹೊರಟ ಮೆರವಣಿಗೆ ಗಾಂಧಿವೃತ್ತ ತಲುಪಿದ ತರುವಾಯ ಉಗ್ರರ ಪ್ರತಿಕೃತಿ ದಹನ ಮಾಡಲಾಯಿತು. ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ಬಜರಂಗದಳ ರಾಜ್ಯ ಸಂಚಾಲಕ ಪ್ರಭಂಜನ್, ದೇಶದ ನಾನಾ ಭಾಗಗಳಿಂದ ಜನರು ಕಾಶ್ಮೀರ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಅಲ್ಲಿನ ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆಯುತ್ತಿದ್ದು ಆ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ. ಈ ಕುರಿತು ಹಿಂದೂ ಬಾಂಧವರು ಎಚ್ಚರ ವಹಿಸಬೇಕು. ವ್ಯಾಪಾರ ಮಾಡುವಾಗಲೂ ವಿವೇಚನೆಯಿಂದ ನಡೆದುಕೊಳ್ಳಬೇಕು ಎಂದರು.

ಪಹಲ್ಗಾಮ್‌ನಲ್ಲಿ ಏಕಾಏಕಿ ಎಂಟು ಜನ ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ದಾಳಿ ಮಾಡುವ ಮೊದಲು ಧರ್ಮ ಕೇಳಿ ಹಿಂದೂಗಳನ್ನು ಹುಡುಕಿ ಹೊಡೆದಿದ್ದಾರೆ. ಈಗ ಪ್ರತಿಯೊಬ್ಬರಿಗೂ ಕಾಶ್ಮೀರಕ್ಕೆ ಹೋಗುವ ಅವಕಾಶವಿದೆ. ಎಲ್ಲರೂ ಅಲ್ಲಿಗೆ ಹೋಗಿ ನಾವು ಅದೇ ರೀತಿ ಹುಡುಕಿ ಹೊಡೆಯಬೇಕು. ಅಲ್ಲಿನ ನಮ್ಮವರನ್ನು ಹುಡುಕಿ ನಾವು ಅವರೊಂದಿಗೆ ವ್ಯಾಪಾರ ಮಾಡಬೇಕು. ಇದರಿಂದ ಹಣ ದುರುಪಯೋಗ ಆಗುವುದಿಲ್ಲ ಎಂದರು.

ಭಾರತೀಯ ಸೇನೆ ನಿವೃತ್ತ ಸುಬೇದಾರ್ ಭಗತ್‌ಸಿಂಗ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಹಾಗಾಗಿ ಅವರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದಾರೆ. ಇದಕ್ಕೆ ಅಲ್ಲಿನ ಸ್ಥಳೀಯ ವ್ಯಾಪಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಪ್ರವಾಸಿಗರು ಕಾಶ್ಮೀರಕ್ಕೆ ಬಂದು ಖರ್ಚು ಮಾಡುವ ಹಣವನ್ನು ವ್ಯಾಪಾರಿಗಳು ಭಯೋತ್ಪಾದನೆಗೆ ಬಳಸುತ್ತಿದ್ದಾರೆ. ಪ್ರವಾಸಿಗರು ಅಲ್ಲಿಗೆ ಬರುವುದನ್ನು ಕಡಿಮೆ ಮಾಡಿ ಎಂದು ಸಲಹೆ ಮಾಡಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದಾಳಿಯ ಹೋಣೆಯನ್ನು ಭಯೋತ್ಪಾದಕ ಸಂಘಟನೆಗಳು ಒಪ್ಪಿಕೊಂಡಿವೆ. ಉಗ್ರರಿಗೆ ಆಶ್ರಯ ನೀಡಿದ ಬಗ್ಗೆ ಪಾಕಿಸ್ತಾನ ಒಪ್ಪಿಕೊಂಡಿದೆ. ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಸಹ ಉಗ್ರ ದಾಳಿಯನ್ನು ಖಂಡಿಸಿವೆ. ಆದರೆ ಕಾಂಗ್ರೆಸ್‌ನವರು ಇದನ್ನು ಅಲ್ಲಗಳೆಯುತ್ತಿದ್ದಾರೆ. ಉಗ್ರರ ಮೇಲೆ ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎಂದು ಮುಸ್ಲೀಮರ ಓಲೈಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್, ಹಿಂದೂಪರ ಸಂಘಟನೆಗಳ ಮುಖಂಡರಾದ ಷಡಾಕ್ಷರಯ್ಯ, ಬದ್ರಿನಾಥ್, ಜಿ.ಎಂ.ಸುರೇಶ್, ಬಿಜೆಪಿ ಮಲ್ಲಿಕಾರ್ಜುನ್, ಸಂಪತ್‌ಕುಮಾರ್, ಶ್ಯಾಮಲಾ ಶಿವಪ್ರಕಾಶ್, ರೇಖಾ, ಬಸಮ್ಮ, ನ್ಯಾಯವಾದಿ ವಿಶ್ವನಾಥಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.