ಸಾರಾಂಶ
ಮಂಡ್ಯದಲ್ಲಿ ಹನುಮಧ್ವಜ ತೆರವು ವಿರೋಧಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಫೆ.9 ಮತ್ತು 10ರಂದು ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹನುಮಾನ್ ಚಾಲೀಸ್ ಪಠಣ ಮೂಲಕ ಪ್ರತಿಭಟನೆಗೆ ಕರೆ ನೀಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಡ್ಯದಲ್ಲಿ ಹನುಮಧ್ವಜ ತೆರವು ವಿರೋಧಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಫೆ.9 ಮತ್ತು 10ರಂದು ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹನುಮಾನ್ ಚಾಲೀಸ್ ಪಠಣ ಮೂಲಕ ಪ್ರತಿಭಟನೆಗೆ ಕರೆ ನೀಡಿದೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡ್ಯ ಕರಗೋಡು ಆಂಜನೇಯ ದೇವಸ್ಥಾನದ ಮುಂಭಾಗ ಅಲ್ಲಿನ ಪಂಚಾಯಿತಿ ಪರವಾನಗಿ ಪಡೆದೇ ಹನುಮಧ್ವಜ ಹಾಕಲಾಗಿದೆ. ಅಯೋಧ್ಯೆ ಮಂದಿರ ಪ್ರತಿಷ್ಠಾಪನೆಯ ಸಡಗರಕ್ಕೆ ಸ್ಥಳೀಯ ಹಿಂದು ವಿರೋಧಿಗಳು ಸೇರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸರ್ಕಾರಕ್ಕೆ ಒತ್ತಡ ಹಾಕಿ ಅದನ್ನು ತೆರವುಗೊಳಿಸಿದ್ದಾರೆ. ಇದು ಧರ್ಮ ವಿರೋಧಿ ಕೃತ್ಯವಾಗಿದ್ದು, ಮತ್ತೆ ಅಲ್ಲಿಯೇ ಧ್ವಜ ಹಾರಾಟಕ್ಕೆ ಅವಕಾಶಕ್ಕೆ ಆಗ್ರಹಿಸಿ ಫೆ. 9ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಿಂದು ಸಂಘಟನೆಗಳು ಹನುಮಾನ್ ಚಾಲೀಸಾ ಪಠಣ ಮೂಲಕ ಪ್ರತಿಭಟನೆ ನಡೆಸಲಿವೆ ಎಂದರು.ಫೆ.2ರಿಂದ 10ರ ವರೆಗೆ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ನಡೆಯಲಿದೆ. ಪ್ರತಿ ಮನೆಗಳಲ್ಲಿ, ಧ್ವಜಕಟ್ಟೆ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜದ ಹಾರಿಸುವ ಮೂಲಕ ಅಭಿಯಾನ ನಡೆಸಲಾಗುವುದು. ಹಿಂದು ಸಮಾಜಕ್ಕೆ ವಿಶ್ವಾಸ ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.
ಮಂಗಳೂರಿನ ಮಳಲಿ ಮಸೀದಿ ನವೀಕರಣ ವೇಳೆ ಹಿಂದು ಮಂದಿರದ ಅವಶೇಷ ಪತ್ತೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಅದು ವಕ್ಫ್ ಆಸ್ತಿ ಅಲ್ಲ ಎಂದು ಕೋರ್ಟ್ ಹೇಳಿದ್ದು, ವಿಚಾರಣೆ ನಡೆಯುತ್ತಿದೆ. ದೇಶದಲ್ಲಿರುವ ಎಲ್ಲ ಮಸೀದಿಗಳ ಹಿನ್ನೆಲೆ ಗಮನಿಸಿದರೆ ಹಿಂದು ಮಂದಿರ, ದೇವಸ್ಥಾನಗಳೇ ಆಗಿರುತ್ತದೆ. ಅವುಗಳೆಲ್ಲ ಹಿಂದುಗಳಿಗೆ ಸೇರಬೇಕು ಎಂದು ಸುನಿಲ್ ಕುಮಾರ್ ಹೇಳಿದರು.