ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜರ ತಪೋ ಭೂಮಿಗೆ ಭಾನುವಾರ ಭೇಟಿ ನೀಡಿದ ದೇಶದ ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಶ್ರೀಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮಿ ಅಮ್ಮನವರು ಹಾಗೂ ರಾಮಾನುಜರ ದರ್ಶನ ಪಡೆದರು.ಬೆಂಗಳೂರಿನಿಂದ ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ 10.45ಕ್ಕೆ ಬಂದಿಳಿದ ಉಪ ರಾಷ್ಟ್ರಪತಿಗಳನ್ನು ರಾಜ್ಯಪಾಲ ತಾವರ್ ಚಂದ್ರ ಗೆಲ್ಹೋಟ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ್, ಮಲ್ಲಿಕಾರ್ಜುನ ಬಾಲದಂಡಿ ಒಳಗೊಂಡ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸ್ವಾಗತಿಸಿತು.
ನಂತರ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೂಗುಚ್ಚ ನೀಡಿ ಸ್ವಾಗತಿಸಿದರು. ನಂತರ ಕಾರಿನಲ್ಲಿ ದೇವಾಲಯಕ್ಕೆ ಬಂದ ಉಪರಾಷ್ಟ್ರಪತಿಗಳಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ನೀಡಿ ಪಾದುಕಾ ಮರ್ಯಾದೆ ಮತ್ತು ತುಳಸಿ ತೀರ್ಥ ಪ್ರಸಾದ ನೀಡಿ ಬರಮಾಡಿಕೊಳ್ಳಲಾಯಿತು.ನಂತರ ಶ್ರೀಚೆಲುವ ನಾರಾಯಣಸ್ವಾಮಿ, ಮಹಾಲಕ್ಷ್ಮಿ ಅಮ್ಮನವರು ಹಾಗೂ ರಾಮಾನುಜರ ದರ್ಶನ ಪಡೆದ ಉಪರಾಷ್ಟ್ರಪತಿ ಅವರಿಗೆ ಸ್ಥಾನೀಕ, ಅರ್ಚಕ ಪರಿಚಾರಕ ಕೈಂಕರ್ಯ ಪರರು ಸಾಂಪ್ರದಾಯಿಕವಾಗಿ ರಾಜಾಶೀರ್ವಾದ ನೆರವೇರಿಸಿದರು.
ಸರ್ಕಾರದ ಪರವಾಗಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉಪರಾಷ್ಟ್ರಪತಿಗಳಿಗೆ ಮೈಸೂರು ಪೇಟ ತೊಡಿಸಿ ನಾರಾಯಣಸ್ವಾಮಿ ಮೂರ್ತಿ ನೀಡಿ ಗೌರವಿಸಿ ಬೀಳ್ಕೊಟ್ಟರು.ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ನಂತರ ಸ್ಥಾನಾಚಾರ್ಯ ಹಾಗೂ ಪಾರು ಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿಯವರ ಮನವಿ ಆಲಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಉಪರಾಷ್ಟ್ರಪತಿಗಳು, ತಿರುಪತಿ, ಶ್ರೀರಂಗಂ, ಕಂಚಿ ಜೊತೆಗೆ ಮೇಲುಕೋಟೆ ದೇಗುಲವು ನಮಗೆ ಮಹತ್ವದ ಧಾರ್ಮಿಕ ಕೇಂದ್ರಗಳಾಗಿವೆ. ರಾಮನುಜರ ಕರ್ಮಭೂಮಿ ಬಗ್ಗೆ ನನಗೂ ಅಪಾರ ಅಭಿಮಾನ ಹಾಗೂ ಭಕ್ತಿ ಇದೆ ಎಂದರು.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಹಕಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.45 ನಿಮಿಷ ದೇವಾಲಯದಲ್ಲಿದ್ದ ರಾಷ್ಟ್ರಪತಿಗಳು 11.30ಕ್ಕೆ ನಿರ್ಗಮಿಸಿದರು. ಹೆಲಿಪ್ಯಾಡ್ ತಲುಪಿ ಶ್ರವಣಬೆಳಗೊಳಕ್ಕೆ ತೆರಳಿದರು.
ಉಪರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಭಕ್ತರ ಪ್ರವೇಶ ನಿರ್ಬಂದಿಸಲಾಗಿತ್ತು. ಮಧ್ಯಾಹ್ನ 12ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಮೇಲುಕೋಟೆ ಇತಿಹಾಸದಲ್ಲೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭೇಟಿ ವೇಳೆ ಅತ್ಯುನ್ನತ ಮಟ್ಟದ ಭಾರಿ ಭದ್ರತೆ ಮಾಡಲಾಗಿತ್ತು.ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಡೀಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ದೇಗುಲದ ಇಒ ಶೀಲಾ, ದೇವಾಲಯದ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತಿತತರು ಭಾಗವಹಿಸಿದ್ದರು.
ಉಪರಾಷ್ಟ್ರಪತಿಗಳು ಹೆಲಿಕ್ಯಾಪ್ಟರ್‌ನಲ್ಲಿ ಬಂದಿಳಿದ ವಿಶೇಷತೆ ರಸ್ತೆಯಲ್ಲಿ ಸಾಗಿದ ವೇಳೆ ನೂರಾರು ಸಂಖ್ಯೆಯ ನಾಗರೀಕರು ವೀಕ್ಷಿಸಿದರು. ಉಪರಾಷ್ಟ್ರಪತಿಗೆ ಹೆಲಿಪ್ಯಾಡ್ ಬಳಿಯೇ ರಾಷ್ಟ್ರಗೀತೆಯ ಗೌರವ ಸಮರ್ಪಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))