ಶೃಂಗೇರಿಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡು ಬಂದ ನೂರಾರು ಕುಟುಂಬಗಳು ಈಗ ಆತಂಕದಲ್ಲಿವೆ. ಇತ್ತ ನೆಲೆ ಕಳೆದುಕೊಳ್ಳುವ ಭೀತಿ, ಅತ್ತ ಕಾಡು ಪ್ರಾಣಿಗಳ ಹಾವಳಿ. ಸರ್ಕಾರ ಅಧಿಕಾರಿ ಗಳು ಎಲ್ಲವನ್ನು ಕಾನೂನು ಪರಿಮಿತಿಯಲ್ಲಿ ಕಾಣುವುದನ್ನು ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಕಾಣಬೇಕು ಎಂದು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಪುನರ್ ವಸತಿ ಹೋರಾಟ ಸಮಿತಿ ಅರುಣ್ ಕುಮಾರ್ ಹೇಳಿದರು.
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಸಭೆಯಲ್ಲಿ ಆಗ್ರಹ.
ಕನ್ನಡಪ್ರಭ ವಾರ್ತೆ, ಶೃಂಗೇರಿಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡು ಬಂದ ನೂರಾರು ಕುಟುಂಬಗಳು ಈಗ ಆತಂಕದಲ್ಲಿವೆ. ಇತ್ತ ನೆಲೆ ಕಳೆದುಕೊಳ್ಳುವ ಭೀತಿ, ಅತ್ತ ಕಾಡು ಪ್ರಾಣಿಗಳ ಹಾವಳಿ. ಸರ್ಕಾರ ಅಧಿಕಾರಿ ಗಳು ಎಲ್ಲವನ್ನು ಕಾನೂನು ಪರಿಮಿತಿಯಲ್ಲಿ ಕಾಣುವುದನ್ನು ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಕಾಣಬೇಕು ಎಂದು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಪುನರ್ ವಸತಿ ಹೋರಾಟ ಸಮಿತಿ ಅರುಣ್ ಕುಮಾರ್ ಹೇಳಿದರು.
ಪಟ್ಟಣದ ಈಡಿಗರ ಭವನದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಪುನರ್ ವಸತಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿ 2005 ರಿಂದ ಹೋರಾಟ ನಡೆಸುತ್ತಲೇ ಬರಲಾಗುತ್ತಿದೆ. ಈ ಹಿಂದೆ ನಡೆದ ಹೋರಾಟದ ದಿಕ್ಕು ತಪ್ಪಿಸಲಾಯಿತು. ನಕ್ಸಲ್ ಹಣೆಪಟ್ಟಿ ಕಟ್ಟಿ ಹೋರಾಟಗಾರರನ್ನು ಸಾಕಷ್ಟು ಹಿಂಸೆ ನೀಡಲಾಯಿತು ಎಂದು ಹೇಳಿದರು.ಕುದುರೆಮುಖ ವ್ಯಾಪ್ತಿ ಮೂಲನಿವಾಸಿಗಳು ಆತಂಕದಲ್ಲಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರ ನೀಡುವ 3-4 ಲಕ್ಷ ಪರಿಹಾರ ಪಡೆದು ಹೊರಹೋಗಿ ಬದುಕಲು ಸಾದ್ಯವಿಲ್ಲ. ಈಗಿನ ಮಾರುಕಟ್ಟೆ ಬೆಲೆಯಂತೆ ಹರಿಹಾರ ನೀಡಬೇಕು. ಸರ್ಕಾರ, ಅಧಿಕಾರಿಗಳಲ್ಲಿ ನಿರ್ಲಕ್ಷ ಧೋರಣೆ ಇದೆ. 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿ. ಸರ್ಕಾರ ಜನರ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು. ಪುನರ್ ವಸತಿ ನೀಡಬೇಕು ಎಂದರು.
ಹೋರಾಟ ಸಮಿತಿ ದಿನೇಶ್ ಹೆಗ್ಡೆ ಮಾತನಾಡಿ ಈ ಭಾಗದ ಜನರ ಮೂಲಭೂತ ಹಕ್ಕುಗಳನ್ನು ಕಸಿಯಲಾಗುತ್ತಿದೆ.ಈ ವರೆಗಿನ ಯಾವುದೇ ಸರ್ಕಾರ, ಶಾಸಕರು,ಸಂಸದರಾಗಲೀ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಕಾನೂನು ಕಾಯ್ದೆಗಳ ಹೆಸರಲ್ಲಿ ಶೋಷಣೆ ಮಾಡಲಾಗುತ್ತಿದೆ. ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆನೆ,ಹುಲಿ,ಚಿರತೆ,ಹಾವುಗಳನ್ನು ತಂದು ಬಿಡಲಾಗುತ್ತಿದೆ. ಕೆಲದಿನಗಳ ಹಿಂದೆ ಆನೆ ದಾಳಿಯ ಘಟನೆ ಕಣ್ಮುಂದೆ ಇದೆ ಎಂದು ನುಡಿದರು.ಈ ಭಾಗದಲ್ಲಿರುವ ಸುಮಾರು 432 ಕುಟುಂಬಗಳಲ್ಲಿ ಬಹುತೇಕ ಬಡ ಕುಟುಂಬಗಳಾಗಿವೆ. ಈಗ ಸ್ವಇಚ್ಛೆ ಯಿಂದ ಹೋಗ ಬಹುದು ಎಂಬ ದ್ವಂದ್ವ ನಿಲುವಿನ ಮೂಲಕ ಅವರ ಬದುಕು ಅಡಕತ್ತರಿಯಲ್ಲಿದೆ. 2005ರಿಂದ ಹಂತ ಹಂತವಾಗಿ ಒಕ್ಕಲೆಬ್ಬಿಸ ಲಾಗುತ್ತಿದೆ. ಹೆಬ್ಬೆ,ವರಾಹಿ ಸಂತ್ರಸ್ಥರಿಗೆ ಪುನರ್ ವಸತಿ, ಪರಿಹಾರ,ಉದ್ಯೋಗ ನೀಡಲಾಗಿತ್ತು.ಆದರೆ ಈ ವ್ಯಾಪ್ತಿ ಜನರಿಗೆ ಏಕೆ ನೀಡಲಾಗುತ್ತಿಲ್ಲ. ಕೇಂದ್ರ,ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಪುನರ್ವಸತಿ ಕಲ್ಪಿಸಿ ಒಂದೇ ಬಾರಿ ಎಲ್ಲರನ್ನು ಒಕ್ಕಲೆಬ್ಬಿಸಬೇಕು. ಹೋರಾಟ ಉಗ್ರ ಸ್ವರೂಪ ತಲುಪಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಜನರ ಜೀವಕ್ಕೆ ಬೆಲೆಯಿಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿದೆ. ಆನೆ ಮನುಷ್ಯನನ್ನು ಕೊಂದರೆ ಸಿಗುವ ಪರಿಹಾರ ₹20 ಲಕ್ಷ, ಅದೇ ಒಕ್ಕಲೆಬ್ಬಿಸಿದ್ದರೆ ಪರಿಹಾರ ಒಂದೆರೆಡು ಲಕ್ಷ ಅಷ್ಟೆ. ಬದುಕಿರುವುದಕ್ಕಿಂತ ಸತ್ತರೆ ಪರಿಹಾರ ಎಂಬಂತಾಗಿದೆ. ಸರ್ಕಾರ ಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡದೆ ಕುಟುಂಬಗಳಿಗೆ ಕೇವಲ ₹ 300-400 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸುವುದು ಕಷ್ಟವಲ್ಲ. ಇಲ್ಲಿನ ಜನರ ಬದುಕಿನ ಅಳಿವು ಉಳಿವಿನ ಪ್ರಶ್ನೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಲಿ. ಇಲ್ಲಿ ಪಕ್ಷ ಮುಖ್ಯವಲ್ಲ.ರಾಜಕೀಯ ಬೇಡ.ಜನರ ಸಮಸ್ಯೆ ಮುಖ್ಯ. ಈ ಜನರಿಗೆ ಬದುಕು ಕಟ್ಟಿಕೊಡುವತ್ತ ಸರ್ಕಾರ ಚಿಂತಿಸಬೇಕು ಎಂದರು.ಸಮಿತಿ ಅಧ್ಯಕ್ಷ ಸುನೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಈ ಭಾಗದ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲದಿನಗಳ ಹಿಂದೆ ಇಬ್ಬರನ್ನು ಆನೆ ಕೊಂದುಹಾಕಿದ ಘಟನೆ ದುರಾದೃಷ್ಟಕರ ಎಂದರು.
ಭರತ್ ಗಿಣಕಲ್ , ದೇವೆಂದ್ರ ಹೆಗಡೆ,ಪ್ರದೀಪ್ ಕೂಳೆಗೆದ್ದೆ,ಸೇರಿದಂತೆ ನೂರಾರು ಸಂತ್ರಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.6 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಈಡಿಗರ ಭವನದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಪುನರ್ ವಸತಿ ಹೋರಾಟ ಸಮಿತಿ ಸಭೆ ನಡೆಯಿತು.