ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕ್ರೀಡೆಯಲ್ಲಿ ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.ಕೊಡಗು ಪತ್ರಕರ್ತರ ಸಂಘ ಹಾಗು ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಕೆ.ಪಿ.ಎಸ್, ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಕ್ರೀಡೆ ಎಂಬುದು ಕೊಡಗಿನ ಜನರ ರಕ್ತದಲ್ಲೇ ಇದೆ. ಪತ್ರಕರ್ತರು ಕೂಡ ಶಾಲಾ, ಕಾಲೇಜು ದಿನಗಳಲ್ಲಿ ಎಲ್ಲಾ ಆಟಗಳನ್ನು ಆಡಿರುತ್ತಾರೆ. ಇಂತಹ ಕ್ರೀಡಾಕೂಟಗಳಲ್ಲಿ ಪರಸ್ಪರ ಭೇಟಿಯ ಸುಸಂದರ್ಭ ಒದಗುತ್ತದೆ ಎಂದರು.ಪತ್ರಕರ್ತರು ಪ್ರತಿನಿತ್ಯ ಒತ್ತಡದಿಂದ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಿದೆ. ದಿನಕ್ಕೆ ಅರ್ಧಗಂಟೆ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು. ವಯಸ್ಸಿಗೆ ಅನುಗುಣವಾಗಿ ವ್ಯಾಯಾಮ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಗ್ರಾಮೀಣ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಸಂಚರಿಸಲು ಉಚಿತ ಬಸ್‍ಪಾಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೊಸ ವರ್ಷದಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.ನಿವೇಶನವಿಲ್ಲದ ಪತ್ರಕರ್ತರು ಜಿಲ್ಲೆಯಲ್ಲಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಗ್ರಾಮೀಣ ಪತ್ರಕರ್ತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರು ಒಗ್ಗಟ್ಟಿನಲ್ಲಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ. ರಾಜಕಾರಣಿಗಳು ಕುರ್ಚಿಗೋಸ್ಕರ ಪರಸ್ಪರ ಕಾಲೆಳೆದುಕೊಳ್ಳುವುದು ಮಾಮೂಲಿಯಾಗಿದೆ. ಇದರಿಂದ ರಾಜಕಾರಣಿಗಳಿಗೆ ಒಳ್ಳೆಯದೇ ಆಗಿರುವ ಸಂದರ್ಭವನ್ನು ಕಂಡಿದ್ದೇವೆ. ಆದರೆ ಪತ್ರಕರ್ತರು ಒಗ್ಗಟ್ಟಿನ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಅನಿವಾರ್ಯತೆಯಿದೆ ಎಂದು ಹೇಳಿದರು.ಆಖಿಲ ಭಾರತ ಸಂತ ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀ ರಾಜೇಶ್‍ನಾಥ ಗುರೂಜಿ ಮಾತನಾಡಿ, ಸಮಾಜಮುಖಿ ಚಿಂತನೆ ಹಾಗು ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರು ಮಾತ್ರ ನಿಜವಾದ ಪತ್ರಕರ್ತರಾಗಲು ಸಾಧ್ಯ ಎಂದು ಹೇಳಿದರು. ಬಡವರು, ಶೋಷಿತರ ಪರವಾಗಿ ಮನಮೀಡಿದು ಅಂತಹವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸುವ ಅನೇಕ ಪತ್ರಕರ್ತರು ನಿವೇಶನ ರಹಿತರಾಗಿದ್ದಾರೆ ಎಂಬುದನ್ನು ಕೇಳಿ ನೋವಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ಮನಸ್ಸು ಮಾಡಿದರೆ, ನಿವೇಶನ ರಹಿತ ಪತ್ರಕರ್ತರಿಗೆ ಕೆಲವೇ ದಿನಗಳನ್ನು ನಿವೇಶನ ಮತ್ತು ಮನೆ ಕಟ್ಟಿಕೊಡಬಹುದು ಎಂದು ಹೇಳಿದರು.
ದುಶ್ಚಟಗಳಿಗೆ ಬಿದ್ದವರನ್ನು ಸರಿಪಡಿಸುವ ಪ್ರಯತ್ನ ಮಾಡುವ ಪತ್ರಕರ್ತರು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರುಳೀಧರ್ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಕನಿಷ್ಠ ಭದ್ರತೆ ಒದಗಿಸಬೇಕು. ಯಾವುದೇ ಸರ್ಕಾರಗಳು ಗ್ರಾಮೀಣ ಕಾರ್ಯನಿರತ ಪತ್ರಕರ್ತರಿಗೆ ಯಾವುದೇ ಪ್ರಾಥಮಿಕ ಸೌಲಭ್ಯಗಳನ್ನು ನೀಡಿಲ್ಲ. ಪ್ರಜಾ ಪ್ರಭುತ್ವವನ್ನು ರಕ್ಷಣೆ ಮಾಡುತ್ತಿರುವುದೇ ಪತ್ರಿಕಾರಂಗ ಮತ್ತು ಗ್ರಾಮೀಣ ಪತ್ರಕರ್ತರು ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಪತ್ರಕರ್ತರು ಯೋಧರಿದ್ದಂತೆ, ಯಾವಾಗಲು ಬೇರೆ ನೋವಿಗೆ ಸ್ಪಂದಿಸುತ್ತಾರೆ. ಸ್ವಾರ್ಥವಿಲ್ಲದೆ ನೊಂದವರ ಕೆಲಸ ಮಾಡಿಕೊಡುತ್ತಾರೆ. ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಾರೆ ಎಂದು ಪ್ರಶಂಸಿಸಿದರು. ಯಾವಾಗಲು ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಿದರೆ ಅವರು ಆರೋಗ್ಯವೂ ಚೆನ್ನಾಗಿರುತ್ತದೆ. ಕೇಡು ಬಯಸಿದರೆ, ಕೇಡುಗಾಲ ಶುರುವಾಗುತ್ತದೆ ಎಂದು ಅಭಿಪ್ರಾಯಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್ ವಹಿಸಿದ್ದರು. ಬಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಮಡಿಕೇರಿ ಪತ್ರಿಕಾ ಭವನ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಉದ್ಯಮಿ ಸುಗುರಾಜ್ , ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ. ಜಿ. ಅನಂತಶಯನ, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಕಾರ್ಯದರ್ಶಿ ಡಿ.ಪಿ.ಲೋಕೇಶ್, ಖಜಾಂಚಿ ದುಷ್ಯಂತ್ ಇದ್ದರು. ಇದೇ ಸಂದರ್ಭ ಮೈಸೂರಿನ ನಾರಾಯಣ ಹೆಲ್ತ್ ಸಿಟಿ ಸೆಂಟರ್‍ನ ವೈದ್ಯರು ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಿದರು.